‘ಎಲ್ಲಿಯೋ ಕುಳಿತು ಆರೋಪ ಮಾಡಿದರೆ ಉತ್ತರಿಸಲು ನಾನು ಅವರ ಜನ ಅಲ್ಲ’: ಯು.ಟಿ. ಖಾದರ್
ವಿದೇಶದಿಂದ ಮರಳಿದ ಅವರು ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ತನ್ನ ವಿರುದ್ಧ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಭರತ್ ಶೆಟ್ಟಿ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪ ವಿಚಾರ ಗಮನಕ್ಕೆ ಬಂದಿದೆ. ಎಲ್ಲಾ ರೋಗಕ್ಕೆ ಮದ್ದಿದೆ ಆದರೆ ಅಸೂಯೆಗೆ ಮದ್ದಿಲ್ಲ. ಹೊಸದಾಗಿ ಮನೆ ಕಟ್ಟುವಾಗ ಅದಕ್ಕೆ ಕಣ್ಣು ಬೀಳಬಾರದೆಂದು ದೃಷ್ಟಿ ಗೊಂಬೆ ಹಾಕುತ್ತೇವೆ. ಕರ್ನಾಟಕ ಶಾಸಕಾಂಗದ ಬಗ್ಗೆ ರಾಜ್ಯದಲ್ಲಿ, ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೌರವ ವ್ಯಕ್ತವಾಗುತ್ತದೆ. ಇಷ್ಟೆಲ್ಲ ಒಳ್ಳೆಯ ಕಾರ್ಯ ಆಗುವಾಗ ಅದಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ರಾಜಕೀಯ ವ್ಯಕ್ತಿಯಾಗಿ ನಾನು ಕೂಡ ಏನನ್ನೂ ಮಾತಾಡಬಹುದು, ಆದರೆ ನಾನು ಸಂವಿದಾನ ಬದ್ದ ಸ್ಪೀಕರ್ ಸ್ಥಾನದಲ್ಲಿದ್ದೇನೆ. ನಾನೀಗ ಪ್ರತಿ ಪಕ್ಷದ ಮಿತ್ರ, ನಮ್ಮ ಶಾಸಕರಿಗೆ ಯಾವುದೆಲ್ಲ ಒಳ್ಳೆಯದಾಗಬೇಕು, ಯಾವ ಸವಲತ್ತು ಕೊಡಬೇಕು ಅದನ್ನು ಕೊಡುವುದು ನನ್ನ ಕರ್ತವ್ಯ. ಮುಂದೆ ಕೂಡ ನಾನು ಮಾಡುತ್ತೇನೆ. ಇಂತಹ ಆರೋಪ ಮಾಡಿ ನನಗೆ ಡ್ಯಾಮೇಜ್ ಮಾಡುವದರಿಂದ ಅವರಿಗೆ ಸಂತೋಷವಾದರೆ ಆಗಲಿ ಎಂದರು.
ನನಗೆ ಯಾವುದೇ ಬೇಸರವಿಲ್ಲ, ನಾನು ಏನು ಹೇಗೆ ಎನ್ನುವುದು ಗೊತ್ತಿದೆ. ನನ್ನ ವಿರುದ್ಧ ಆರೋಪ ಇದು ಮೊದಲೇನಲ್ಲ. ನನ್ನ ರಾಜಕೀಯದುದ್ದಕ್ಕೂ ಈ ರೀತಿಯ ಆರೋಪ ಮಾಡಿದ್ದಾರೆ. ನಾನು ಮೊದಲ ಬಾರಿಯ ಶಾಸಕ ಆದಾಗಿಂದ ಈ ರೀತಿಯ ಮಾತು ಕೇಳಿದ್ದೇನೆ ಎಂದು ಹೇಳಿದರು