ಜಾನುವಾರು ಅಕ್ರಮ ವಧೆ: ಶೆಡ್‌ಗಳ ಮುಟ್ಟುಗೋಲು ದ.ಕ. ಜಿಲ್ಲಾ ಎಸ್ಪಿ ಸೂಚನೆ
ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ನಾಸಿರ್ ಮತ್ತಿತರರು ಜಾನುವಾರು ವಧೆಗೆ ಬಳಸಿದ ಇದಿನಬ್ಬರ ಮನೆ, ಶೆಡ್ಡನ್ನು ಕಲಂ 8 (1)ರ ಪ್ರಕಾರ ತನಿಖಾಧಿಕಾರಿ ಜಪ್ತಿ ಮಾಡಿ ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗದ ದಂಡಾಧಿಕಾರಿಗೆ ವರದಿ ಮಾಡಿದ್ದರು.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಟ್ಟು ಗ್ರಾಮದ ಮುಹಮ್ಮದ್ ರಫೀಕ್ರ ಮನೆ ಮತ್ತು ಖಾಲಿ ಜಾಗವನ್ನು ಕಲಂ 8 (1)ರ ಪ್ರಕಾರ ತನಿಖಾಧಿಕಾರಿ ಜಪ್ತಿ ಮಾಡಿ ಮುಟ್ಟುಗೋಲಿಗಾಗಿ ಪುತ್ತೂರು ಉಪವಿಭಾಗದ ದಂಡಾಧಿಕಾರಿಗೆ ವರದಿ ಮಾಡಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ವೇಳೆ ಆರೋಪಿ ಮುಹಮ್ಮದ್ ಮನ್ಸೂರ್ ಎಂಬಾತನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡು ತ್ತಿದ್ದ ಮಂಗಳೂರಿನ ಜೆಎಂ ರಸ್ತೆಯ ಭಟ್ಕಳ ಬಜಾರ್ ಬಂದರ್ ಕುದ್ರೋಳಿ ಬಳಿಯಿರುವ ಕಟ್ಟಡವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿ ಜಪ್ತಿ ಮಾಡಿ ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗದ ದಂಡಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಅದರಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020ರಡಿ ಕೃತ್ಯಕ್ಕೆ ಬಳಸಿರುವ ಸ್ಥಳ ಮತ್ತು ಕಟ್ಟಡಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ಹಸನಬ್ಬರ ಮನೆ/ಅಕ್ರಮ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಲಾಗಿತ್ತು. ಇದೀಗ ಮತ್ತೆ ಮೂರು ಕಡೆಯ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ.