ಪುಸ್ತಕ ಪ್ರೀತಿಯಿಂದ ಸಿಗುವ ಸುಖವನ್ನು ಯುವ ಜನತೆ ಅನುಭವಿಸಬೇಕು: ಪ್ರೊ. ಜಯಕರ ಭಂಡಾರಿ ಎಂ.
Tuesday, October 14, 2025
ಮಂಗಳೂರು: ನಾವು ಪುಸ್ತಕಗಳನ್ನು ಓದುವುದರಿಂದ ಸಿಗುವ ಅನುಭವ ಮತ್ತು ಜ್ಞಾನ ಬೇರೆ ಎಲ್ಲೂ ಸಿಗುವುದಿಲ್ಲ. ಓದುವುದರಿಂದ ಒಂದು ಉತ್ತಮ ಸುಖ ಸಿಗುತ್ತದೆ. ಆದರೆ ಈಗಿನ ಯುವಕ ಯುವತಿಯರು ಓದುವ ಸುಖದಿಂದ ದೂರ ಸರಿಯುತ್ತಿದ್ದಾರೆ. ಹೆಚ್ಚಿನ ಯುವ ಜನತೆ ಪುಸ್ತಕ ಓದುವ ಮೂಲಕ ಆ ಸುಖವನ್ನು ಅನುಭವಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಹೇಳಿದರು.
ಅವರು ಇಂದು ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಗ್ರಂಥಾಲಯದ ಸಹಯೋಗದೊಂದಿಗೆ ಪುಸ್ತಕ ಪ್ರೀತಿ ಕಾರ್ಯಕ್ರಮದ ಅಂಗವಾಗಿ ಜ್ಞಾನಪೀಠ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಜನ್ಮದಿನದ ಪ್ರಯುಕ್ತ ಅವರ ಕೃತಿಗಳ ಪ್ರದರ್ಶನ, ಅವಲೋಕನ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಕನಿಷ್ಠ ತಿಂಗಳಿಗೆ ಒಂದಾದರೂ ಪುಸ್ತಕವನ್ನು ಓದಿ ತಮ್ಮ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಳ್ಳಿ. ಅದರೊಂದಿಗೆ ಮುಂದೊಂದು ದಿನ ನೀವೂ ಕೂಡ ಪುಸ್ತಕ ಬರೆಯುವಂತಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ ಶಿವಾನಿ ‘ಸರಸಮ್ಮನ ಸಮಾಧಿ’, ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ನಾಗರತ್ನ ‘ಬೆಟ್ಟದ ಜೀವ’, ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಶಂಕ್ರಮ್ಮ ಮಂದಾಲ ‘ಅಳಿದ ಮೇಲೆ’, ದ್ವಿತೀಯ ಬಿ.ಎಸ್ಸಿಯ ವಿದ್ಯಾರ್ಥಿನಿ ಸ್ಮೃತಿ ‘ಮೂಕಜ್ಜಿಯ ಕನಸುಗಳು’, ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ವೈಷ್ಣವಿ ‘ಚೋಮನ ದುಡಿ’ ಪ್ರಥಮ ಬಿ.ಎ. ವಿದ್ಯಾರ್ಥಿನಿ ಶ್ರೀಜಾ ‘ಹೋಳಿಗೆ ಕಥೆ’ ಪುಸ್ತಕಗಳ ಅವಲೋಕನವನ್ನು ವ್ಯಕ್ತಪಡಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ವಸಂತಿ ಪಿ., ಗ್ರಂಥಪಾಲಕಿ ಕುಮಾರಿ ಉಮಾ ಎ.ಬಿ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ನಸೀಮಾ ಬೇಗಂ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಗಳಾದ ಹರ್ಷಿತಾ ಮತ್ತು ಋಷಿತ ಪ್ರಾರ್ಥನೆ ನೆರವೇರಿಸಿದರು. ಸೃಷ್ಟಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ಕಾವ್ಯ ವಂದಿಸಿದರು.









