ಕೊಳಲು ನುಡಿಸುತ್ತಾ ಅಂಗಾತ ಮಲಗಿ ಈಜಿ ವಿಶ್ವ ದಾಖಲೆ: ಮಂಗಳೂರಿನ ಯುವಕನ ಸಾಧನೆ ಗಿನ್ನೆಸ್ ದಾಖಲೆಗೆ

ಕೊಳಲು ನುಡಿಸುತ್ತಾ ಅಂಗಾತ ಮಲಗಿ ಈಜಿ ವಿಶ್ವ ದಾಖಲೆ: ಮಂಗಳೂರಿನ ಯುವಕನ ಸಾಧನೆ ಗಿನ್ನೆಸ್ ದಾಖಲೆಗೆ


ಮಂಗಳೂರು: ಸಾಮಾನ್ಯರಿಗೆ ಕೊಳಲನ್ನು ಊದಿ ಅದರಿಂದ ಸ್ವರ ಎಬ್ಬಿಸುವುದೇ ದೊಡ್ಡ ಸಾಹಸವಾಗಿರುವಾಗ ಮಂಗಳೂರಿನ ಯುವಕನೊಬ್ಬ ಈಜು ಕೊಳದಲ್ಲಿ ಅಂಗಾತ ಮಲಗಿ ಈಜಾಡುತ್ತಲೇ ಕೊಳಲನ್ನು ನುಡಿಸುತ್ತ ವಿಶ್ವದಾಖಲೆ ಬರೆದಿದ್ದಾರೆ. ಕೊಳಲಿಗೆ ನೀರು ಹೊಕ್ಕದಂತೆ ತನ್ನ ಮುಖವನ್ನು ನೀರಿನ ಮೇಲಿಟ್ಟುಕೊಂಡೇ 750 ಮೀಟರ್ ಉದ್ದಕ್ಕೆ ಈಜುತ್ತಲೇ ಸುಮಾರು 20 ನಿಮಿಷ ಕಾಲ ಕೊಳಲು ಊದಿ ಸಾಧನೆ ಮಾಡಿದ್ದಾನೆ. 

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯದ ಈಜು ಕೊಳದಲ್ಲಿ ರೂಬನ್ ಜೇಸನ್ ಮಚಾದೋ ಎಂಬ ಅಭಿಜ್ಞಾತ ಸಂಗೀತ ಕಲಾವಿದ ಯಾರೂ ಮಾಡದ ಹೊಸ ದಾಖಲೆ ಸ್ಥಾಪಿಸಿದ್ದಾರೆ. 75 ಮೀಟರ್ ಉದ್ದಗಲದ ಈಜು ಕೊಳವನ್ನು ಕೊಳಲಿನೊಂದಿಗೆ ಈಜಾಡುತ್ತಲೇ ಆರು ಬಾರಿ ಸುತ್ತು ಹಾಕಿದ್ದಾರೆ. ತಾನು ನೀರಿನಲ್ಲಿ ಇದ್ದೇನೆಂಬ ಪರಿವೆಯೇ ಇಲ್ಲದೆ ತದೇಕ ಚಿತ್ತದಿಂದ ಕೊಳಲನ್ನು ಸುಶ್ರಾವ್ಯವಾಗಿ ನುಡಿಸುತ್ತ ಸಾಗಿದ್ದಾರೆ.


ರೂಬನ್ ಮಚಾದೋ ಅವರು ಈ ಹಿಂದೆ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದವರು. ಈಗ ಉಪನ್ಯಾಸಕ ವೃತ್ತಿಯನ್ನು ಬಿಟ್ಟು ಪೂರ್ಣಕಾಲಿಕವಾಗಿ ಸಂಗೀತಕಾರನಾಗಿದ್ದಾರೆ. ಕೊಳಲು, ಸ್ಯಾಕ್ಸೋಫೋನ್, ಗಿಟಾರ್ ಹೀಗೆ ಎಲ್ಲ ರೀತಿಯ ಸಂಗೀತ ಉಪಕರಣಗಳನ್ನು ನುಡಿಸುತ್ತಾರೆ. ಅಲ್ಲದೆ, ತನ್ನದೇ ಆದ ಬ್ಯಾಂಡ್ ಸೆಟ್ ಒಂದನ್ನು ಮಾಡಿದ್ದು ಕಾರ್ಯಕ್ರಮಗಳನ್ನು ನೀಡುತ್ತಾರೆ. ಬಾಲಿವುಡ್‌ನಲ್ಲಿಯೂ ಸೋನು ನಿಗಮ್ ಜೊತೆಗೆ ಕೆಲವು ಚಿತ್ರಗಳಿಗೆ ಹಿನ್ನೆಲೆ ಸಂಗೀತಕ್ಕೆ ಕೊಳಲು ವಾದನದ ಸಾಥ್ ನೀಡಿದ್ದಾರೆ.

ಆರು ಸುತ್ತು ಕೊಳಲು ನುಡಿಸುತ್ತ ಅಂಗಾತ ಈಜಾಡುತ್ತ ಸಾಗಿದ ವೇಳೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದವರು ಚಿತ್ರೀಕರಣ ಮಾಡಿದ್ದಾರೆ. ರೆಕಾರ್ಡ್ ತಂಡದ ಮನೀಶ್ ಬಿಷ್ಣೋಯ್ ಉಪಸ್ಥಿತರಿದ್ದು, ರೂಬನ್ ಮಚಾದೋ ಅವರ ಸಾಧನೆಯನ್ನು ಕೊಂಡಾಡಿದರು. ತನಗೂ ಈಜು ಗೊತ್ತಿದೆ, ಆದರೆ ಈಜಾಡುತ್ತ ಕೊಳಲು ನುಡಿಸಿದ್ದನ್ನು ಇದೇ ಮೊದಲು ನೋಡಿದ್ದು ಎಂದು ಹೇಳಿದರು.

ರೂಬನ್ ಮಚಾದೋ ಅವರು ಮಂಗಳೂರಿನ ದೇರೆಬೈಲ್ ನಿವಾಸಿಯಾಗಿದ್ದು ದಾಖಲೆ ಸ್ಥಾಪಿಸಿ ನೀರಿನಿಂದ ಮೇಲೆ ಬರುತ್ತಲೇ ತಂದೆ ರಿಚರ್ಡ್ ಮಚಾದೋ ಆನಂದ ತುಂದಿಲರಾಗಿ ಆಲಿಂಗಿಸಿಕೊಂಡು ಕಣ್ಣೀರು ಹಾಕಿದರು. ಪತ್ನಿ ಅನುಷಾ ಕೂಡ ಕಣ್ಣೀರು ಸುರಿಸಿಕೊಂಡೇ ಆಲಿಂಗಿಸಿದರು. ತಾಯಿ ಜೇನ್ ಮಚಾದೋ ಅವರು ಕೂಡ ಈಜುಗಾರ್ತಿಯಾಗಿದ್ದು ಕೊಳಲನ್ನೂ ನುಡಿಸುತ್ತಾರಂತೆ. ಭಾರತೀಯ ಸಂಗೀತದ ಬಗ್ಗೆ ಅಪ್ಪಟ ಆಸಕ್ತಿ ಬೆಳೆಸಿಕೊಂಡ ಕುಟುಂಬವದು.

ರೂಬನ್ ಮೂಲತಃ ಈಜು ಪಟುವಲ್ಲ. ಈಗ 29ರ ಹರೆಯದವರಾಗಿದ್ದು 26 ವರ್ಷದ ವರೆಗೂ ನೀರಿಗಿಳಿದವರೇ ಅಲ್ಲ. ಮೂರು ವರ್ಷಗಳ ಹಿಂದೆ ಮಂಗಳಾ ಈಜು ಕೊಳದಲ್ಲಿ ಈಜು ಕಲಿತವರು. ಮೊದಲಿನಿಂದಲೂ ಕೊಳಲಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರನ್ನು ಒಂದು ತಿಂಗಳ ಹಿಂದೆ ರೆಕಾರ್ಡ್ ಮಾಡುವತ್ತ ಪ್ರೇರೇಪಿಸಿದವರು ತಂದೆಯಂತೆ. ಕೊಳಲು ನುಡಿಸುತ್ತ ಈಜಾಡಿ ದಾಖಲೆ ಮಾಡಿದರೆ ಹೇಗೆ ಎಂದು ತಂದೆ ರಿಚರ್ಡ್ ಮಚಾದೋ ಪ್ರೋತ್ಸಾಹ ನೀಡಿದರು. ದಿನವೂ ನಸುಕಿನ ನಾಲ್ಕು ಗಂಟೆಗೆದ್ದು ಕೊಳಲು ನುಡಿಸುತ್ತ ನಿರಂತರ ಅಭ್ಯಾಸದಿಂದ ಈಜಿನೊಂದಿಗೆ ದಾಖಲೆ ಸ್ಥಾಪಿಸುವಂತಾಗಿದೆ ಎಂದು ಸ್ಮರಿಸುತ್ತಾರೆ ರೂಬನ್.

ಇದೇ ವೇಳೆ, ವರ್ಲ್ಡ್ ರೆಕಾರ್ಡ್ ಬಗ್ಗೆ ಅನಿಸಿಕೆ ಹಂಚಿಕೊಂಡ ಅಲೋಶಿಯಸ್ ವಿವಿಯ ಉಪ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್, ಎರಡು ತಿಂಗಳ ಹಿಂದಷ್ಟೇ ನಮ್ಮಲ್ಲಿ ರೆಮೋನಾ ನೃತ್ಯದಲ್ಲಿ ವಿಶ್ವದಾಖಲೆ ಮಾಡಿದ್ದರು. ಇದೀಗ ನಮ್ಮದೇ ಈಜು ಕೊಳದಲ್ಲಿ ರೂಬನ್ ಮತ್ತೊಂದು ದಾಖಲೆ ಸ್ಥಾಪಿಸಿದ್ದಾರೆ. 140 ವರ್ಷಗಳ ಇತಿಹಾಸ ಇರುವ ನಮ್ಮ ಕಾಲೇಜಿಗೆ ಇದೊಂದು ಹೆಮ್ಮೆ ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article