ದ.ಕ.ದಲ್ಲಿ ಮನೆ ಮನೆಗೆ ಪೊಲೀಸ್ ಯೋಜನೆ ಆರಂಭ

ದ.ಕ.ದಲ್ಲಿ ಮನೆ ಮನೆಗೆ ಪೊಲೀಸ್ ಯೋಜನೆ ಆರಂಭ

ಮಂಗಳೂರು: ರಾಜ್ಯ ಸರಕಾರ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ‘ಮನೆ ಮನೆಗೆ ಪೊಲೀಸ್’ ಎಂಬ ಯೋಜನೆಯನ್ನು ಆರಂಭಿಸಿದೆ. ಆದರೆ ಈ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಮತ್ತು ಪ್ರಚಾರದ ಕೊರತೆಯಿಂದಾಗಿ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ತುಂಬುವುದು, ಸುರಕ್ಷತೆಯ ವಾತಾವರಣ ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಬಹುತೇಕ ಮಂದಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ ಹಾಗಾಗಿ ದಿಢೀರ್ ಮನೆಗೆ ಆಗಮಿಸಿ ಪ್ರಶ್ನಿಸುವ ಪೊಲೀಸರಿಗೆ ಏನು ಉತ್ತರಿಸಬೇಕು ಎಂಬ ಗೊಂದಲ ಸಾರ್ವಜನಿಕರಲ್ಲಿದೆ.

ದೇಶದಲ್ಲೇ ಪ್ರಥಮ ಎಂಬಂತೆ ‘ಮನೆ ಮನೆಗೆ ಪೊಲೀಸ್’ ಎಂಬ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸುತ್ತಿದೆ. ಪ್ರತಿಯೊಂದು ಮನೆಗೂ ಪೊಲೀಸರು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಿದ್ದಾರೆ. ಈ ಯೋಜನೆಯಿಂದ ಕಾನೂನಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಕೂಡ ಸಹಾಯವಾಗಲಿದೆ. ಅಲ್ಲದೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ನೆರವಾಗಲಿದೆ ಎಂದು ಹೇಳಲಾಗುತ್ತದೆ.

ಬೆಂಗಳೂರಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ ಮುಂದಾದಾಗ ಕೆಲವು ಕಡೆಗಳಲ್ಲಿ ಅಪಸ್ವರ ಕೇಳಿ ಬಂದಿತ್ತು. ದ.ಕ. ಜಿಲ್ಲೆಯ ಬಹುತೇಕ ಮಂದಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಪ್ರಚಾರದ ಕೊರತೆಯೂ ಇದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವೂ ಆಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ನಗರ ಹೊರವಲಯದ ಹಲವು ಕಡೆ ಶನಿವಾರ ಪೊಲೀಸರು ಮನೆ ಮನೆಗೆ ತೆರಳಿ ಮಾಹಿತಿ ಕೇಳಲು ಆರಂಭಿಸಿದಾಗ ಕೆಲವರು ಸ್ಪಂದಿಸಿದ್ದರೆ, ಇನ್ನು ಕೆಲವರು ಆತಂಕಿತರಾದ ಬಗ್ಗೆ ವರದಿಯಾಗಿದೆ. ಮತ್ತೆ ಕೆಲವರು ಪರಿಚಯದ ಸಾಮಾಜಿಕ ಕಾರ್ಯಕರ್ತರು, ಮುಖಂಡರಿಗೆ ಕರೆ ಮಾಡಿ ಪೊಲೀಸರು ಮನೆಗೆ ಬಂದು ಮಾಹಿತಿ ಕೇಳುತ್ತಿದ್ದಾರೆ. ಮನೆಯ ಫೋಟೊ ತೆಗೆಯುತ್ತಿದ್ದಾರೆ. ಏನು ಮಾಡುವುದು? ಎಂದು ಕೇಳಿದ ಪ್ರಸಂಗವೂ ನಡೆದಿದೆ.

ನಿಮಗೆ ಏನಾದರು ಸಮಸ್ಯೆ ಇದೆಯೇ? ಯಾರಿಂದಲಾದರು ನಿಮಗೆ ಕಿರುಕುಳ ಇದೆಯಾ? ಮಾದಕ ವಸ್ತು ಮಾರಾಟದ ಬಗ್ಗೆ ಅನುಮಾನವಿದೆಯೇ? ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆಯೇ? ಸೈಬರ್ ವಂಚನೆಯಾಗಿದೆಯೇ? ಡಿಜಿಟಲ್ ಅರೆಸ್ಟ್‌ನ ಬೆದರಿಕೆ ಕರೆ ಬಂದಿದೆಯೇ? ಇತ್ಯಾದಿಯಾಗಿ ಪೊಲೀಸರು ಪ್ರಶ್ನಿಸುತ್ತಾರೆ. ನೀವು ಯಾವ ಸಮಸ್ಯೆಯನ್ನೂ ಬಚ್ಚಿಡಬೇಡಿ. ನಮ್ಮೊಂದಿಗೆ ಮುಕ್ತವಾಗಿ ಹಂಚಿ ಕೊಳ್ಳಿ. ನಮ್ಮಿಂದಾದಷ್ಟು ನೆರವು, ಸಹಕಾರ ನೀಡಲು ನಾವು ಬದ್ದ ಎಂದು ಪೊಲೀಸರು ಭರವಸೆ ನೀಡಿದರೂ ಕೂಡ ಸೂಕ್ತ ಮಾಹಿತಿ ಮತ್ತು ಈ ಯೋಜನೆಯ ಬಗ್ಗೆ ಸಕಾಲಕ್ಕೆ ಜಾಗೃತಿ ಮೂಡಿಸದ ಕಾರಣ ಗೊಂದಲ ಸೃಷ್ಟಿಯಾಗಿದೆ.

ಇದು ಪೊಲೀಸ್ ಇಲಾಖೆಯ ಉತ್ತಮ ಯೋಜನೆಯಾಗಿದೆ. ಆದರೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದೆ ದಿಢೀರ್ ಮನೆಗೆ ತೆರಳಿ ಸಾರ್ವಜನಿಕರಲ್ಲಿ ವಿಶ್ವಾಸ ತುಂಬುವ, ರಕ್ಷಣೆಯ ಭರವಸೆ ನೀಡುವಂತಹ ಪ್ರಶ್ನೆಗಳನ್ನು ಕೇಳಿದರೂ ತಕ್ಷಣಕ್ಕೆ ಉತ್ತರಿಸಲು ಸಾಧ್ಯವಾಗದು. ಹಾಗಾಗಿ ಪೊಲೀಸ್ ಇಲಾಖೆಯು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article