ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟೆಣ್ಣವರ್
ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ತಲೆಮರೆಸಿದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಹೇಳಿಕೆ ನೀಡಿದ ಕಾರಣಕ್ಕೆ ಪೊಲೀಸ್ ನೋಟಿಸ್ ನೀಡಿದ್ದು, ಆದುದರಿಂದ ಗಿರೀಶ್ ಮಟ್ಟೆಣ್ಣವರ್ ಇಂದು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದರು.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಮೂರು ನೋಟೀಸ್ ನೀಡಿದರೂ ಬೆಳ್ತಂಗಡಿ ಠಾಣೆಗೆ ಮಹೇಶ್ ಶೆಟ್ಟಿ ಹಾಜರಾಗದೆ ತಲೆಮರೆಸಿದ್ದರು. ಈ ನಡುವೆ ಮಹೇಶ್ ಶೆಟ್ಟಿ ಎಲ್ಲೂ ಓಡಿಹೋಗಿಲ್ಲ, ನಾನು ಈಗ ಅವರನ್ನು ಉಜಿರೆಯಲ್ಲಿ ಮಾತಾನಾಡಿಕೊಂಡು ಬಂದೆ, ಪೊಲೀಸರಿಗೆ ಸಿಗದಿದ್ದಾರೆ ನನ್ನ ತಪ್ಪಾ ಎಂದು ಪೊಲೀಸ್ ಠಾಣೆಯ ಹೊರಭಾಗದಲ್ಲಿ ಮಾಧ್ಯಮಗಳಿಗೆ ಮಟ್ಟಣ್ಣೆವರ್ ಹೇಳಿಕೆ ನೀಡಿದ್ದರು.
ಅ.11 ರಂದು ಮಟ್ಟೆಣ್ಣವರ್ ಹೇಳಿಕೆ ನೀಡಿದ್ದು, ಇದರ ಆಧಾರದಲ್ಲಿ ಬೆಳ್ತಂಗಡಿ ಪೊಲೀಸರು ಅ.15 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಹೀಗಾಗಿ ಮಟ್ಟೆಣ್ಣೆವರ್ ಶನಿವಾರ ಇನ್ಸ್‌ಪೆಕ್ಟರ್ ಸುಬ್ಬಪುರ ಮಠ್ ಅವರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಮಟ್ಟೆಣ್ಣವರ್ ಜೊತೆ ಹೋರಾಟಗಾರ ಜಯಂತ್ ಕೂಡ ಆಗಮಿಸಿದ್ದರು.