ಐಟಿ ಪಾರ್ಕ್ ಕರಾವಳಿ ಪ್ರವಾಸೋದ್ಯಮದ ಗೇಮ್ ಚೇಂಜರ್: ದಿನೇಶ್ ಗುಂಡೂರಾವ್
ಶುಕ್ರವಾರ ಮುಡಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೀಚ್ ಮತ್ತು ಜಲಾಭಿಮುಖ (ವಾಟರ್ಫ್ರಂಟ್) ರಸ್ತೆಯಾಗಿ ಸಮುದ್ರ ಬದಿಯ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇದನ್ನು ಮಾಸ್ಟರ್ಪ್ಲಾನ್ಗೆ ಒಳಪಡಿಸಿದರೆ ಪ್ರವಾಸೋದ್ಯಮಕ್ಕೆ ಪುಷ್ಟಿನೀಡಲಿದೆ. ಇದೇ ವೇಳೆ ಕಣ್ಣೂರು ಭಾಗದಲ್ಲಿ ಮತ್ತೊಂದು ಜಲಾಭಿಮುಖಿ ರಸ್ತೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ನಲ್ಲಿ ಸೇರ್ಪಡೆಗೊಳಿಸಲು ಸೂಚಿಸಲಾಗಿದೆ. ಇದರಿಂದ ರಸ್ತೆ ಸಂಪರ್ಕ ವ್ಯವಸ್ಥೆಯು ಜನರಿಗೆ ನಗರದೊಳಗಿನ ಪ್ರವೇಶವನ್ನು ವ್ಯಾಪಕಗೊಳಿಸಲಿದೆ. ಮಾಸ್ಟರ್ ಪ್ಲಾನ್ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಯೊಂದಿಗೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದರು.
ಮುಡಾ ವ್ಯಾಪ್ತಿಯಲ್ಲಿ ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಮೂರು ಕಡೆ ವಸತಿ ಬಡಾವಣೆಗೆ ಲೇಔಟ್ಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಬೇಕು. ಕೊಣಾಜೆಯಲ್ಲಿ ನವೆಂಬರ್ನೊಳಗೆ ಕಾಮಗಾರಿ ಪೂರ್ತಿಗೊಳಿಸಲು ಸೂಚಿಸಲಾಗಿದೆ. ಶೇ. 20ರಷ್ಟುಮಾತ್ರವೇ ಬುಕ್ಕಿಂಗ್ ಆಗಿದ್ದು, ಕಾಮಗಾರಿ ಶೀಘ್ರ ಮುಗಿದರೆ ಬುಕ್ಕಿಂಗ್ಗೆ ವೇಗ ಸಿಗಲಿದೆ. ಇಲ್ಲಿನ ಆದಾಯವನ್ನು ಇನ್ನೊಂದು ಬಡಾವಣೆಯ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಆಗಲಿದೆ. ನವೆಂಬರ್ ತಿಂಗಳಲ್ಲಿ ಮತ್ತೆ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಂಜತ್ತಬೈಲ್ ಲೇಔಟ್ನಲ್ಲಿ ಸಮಸ್ಯೆಯಾಗಿದ್ದು, ಅಲ್ಲಿ ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಬೇಕಾಗಿದೆ. ಭೂ ಖರೀದಿಯಾಗಿದೆ. ಅದಕ್ಕೆ ಮಾಡಿರುವ ವೆಚ್ಚ ನಷ್ಟಆಗದಂತೆ ಸ್ಪಷ್ಟವಾದ ತೀರ್ಮಾನಕ್ಕೆ ಬರಬೇಕಾಗಿದೆ. ಅವೈಜ್ಞಾನಿಕವಾಗಿ ಹೆಚ್ಚಿನ ಬೆಲೆಗೆ ಖರೀದಿ ಮಾಡಿರುವುದು ಸಮಸ್ಯೆ ಆಗಿದೆ. ಅದು ನಷ್ಟಆಡುವ ಪ್ರಾಜೆಕ್ಟ್ ಆಗಿ ಕಂಡು ಬರುತ್ತಿದೆ. ಅದರಿಂದ ಯಾವ ರೀತಿಯಲ್ಲಿ ಹೊರ ಬರಬೇಕಾಗಿದೆ ಎಂಬುದನ್ನು ನೋಡಬೇಕಾಗಿದೆ. ಚೇಳ್ಯಾರು ವಸತಿ ಬಡಾವಣೆಯ ಕಾಮಗಾರಿ ಮುಗಿಸಲು ಹಣದ ಅಗತ್ಯವಿದೆ. ಅದಕ್ಕಾಗಿ ಕೊಣಾಜೆಯ ಯೋಜನೆ ಪೂರ್ಣಗೊಳಿಸಿ ಅಲ್ಲಿನ ಆದಾಯದಿಂದ ಚೇಳ್ಯಾರು ವಸತಿ ಬಡಾವಣೆಯ ಕಾಮಗಾರಿಯನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ಪ್ರಗತಿಯ ಕುರಿಂತೆ ಇಂದು ಮೇಲ್ನೋಟಕ್ಕೆ ಕೆಲವಷ್ಟೇ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಲು ಸಾಧ್ಯವಾಗಿದೆ. ನವೆಂಬರ್ನಲ್ಲಿ ಮತ್ತೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ತೊಂದರೆಯಾಗದಂತೆ ಕ್ರಮ..
‘ಮುಡಾದಲ್ಲಿ ಸಾರ್ವಜನಿಕರ ವಿವಿಧ ರೀತಿಯ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಂದ ಬರುವ ಅರ್ಜಿಗೆ ನಿಗದಿತ ಅವಧಿಯೊಳಗೆ ಪರಿಶೀಲನೆ ನಡೆಸಿ
ಅನುಮೋದನೆ ನೀಡಿ, ಭೂಪರಿವರ್ತನೆ ಅಥವಾ ಎನ್ಒಸಿ ನೀಡುವಲ್ಲಿ ಕ್ರಮ ಆಗಬೇಕು. ಸಾರ್ವಜನಿಕರು ಪದೇ ಪದೇ ಕಚೇರಿಗೆ ಅಲೆದಾಡುವಂತಾಗಬಾರದು. ನಗರ ಯೋಜನೆಯಡಿ ಎರಡೆರಡು ಬಾರಿ ತಪಾಸಣೆ ಮಾಡುವ ಕ್ರಮದ ಬದಲು ಏಕಕಾಲಕ್ಕೆ ಮುಗಿಸಿ ನಿಗದಿತ ಅವಧಿಯೊಳಗೆ ಅನುಮೋದನೆ ನೀಡುವಲ್ಲಿ ಕ್ರಮ ವಹಿಸಲು ಮುಡಾ ಆಯುಕ್ತರಿಗೆ ಸ್ಪಷ್ಟಸೂಚನೆ ನೀಡಲಾಗಿದೆ. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವಂತೆಯೂ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಪ್ರವಾಸೋದ್ಯಮ ತಾಣ..
‘ಮಂಗಳೂರು ಮತ್ತು ಮೈಸೂರು ನಗರವನ್ನು ಪ್ರವಾಸೋದ್ಯಮ ತಾಣವಾಗಿಸಿ ಹೂಡಿಕೆದಾರರನ್ನು ಆಕರ್ಷಿಸುವ ತಾಣವಾಗಿಸುವ ನಿಟ್ಟಿನಲ್ಲಿ ಈ ಎಲ್ಲಾ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ಧಾರವೂ ಆಗಿದೆ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ 135 ಕೋಟಿ ರೂ.ಗಳ ಐಟಿ ಪಾರ್ಕ್ಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಸರಕಾರ ಹಾಗೂ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಹತ್ವದ ನಿರ್ಧಾರ ಇದಾಗಿದೆ. ಹೂಡಿಕೆದಾರರು ಮಂಗಳೂರಿಗೆ ಬರಲು ಆಸಕ್ತಿ ತೋರುತ್ತಿದ್ದಾರೆ. ವಾಣಿಜ್ಯ ಜಾಗಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಅದಕ್ಕೆ ಪೂರಕವಾಗಿ ಇಲ್ಲಿ ಸೌಹಾರ್ದ ವಾತಾವರಣದೊಂದಿಗೆ ಹೂಡಿಕೆ ಮಾಡುವವರಿಗೆ ಪೂರಕವಾಗಿ ಪಾರದರ್ಶಕ ವಾತಾವರಣ ರೂಪಿಸಲು ಸರಕಾರ ಬದ್ಧವಾಗಿದೆ ಎಂದರು.