ಮಂಗಳೂರು ವಿ.ವಿ. ಒಪ್ಪಂದಕ್ಕೆ ಸಹಿ
ಮಂಗಳೂರು: ಮಂಗಳೂರು ವಿವಿ ಕೇರಳದ ಮಲಬಾರ್ ಕ್ಯಾನ್ಸರ್ ಸೆಂಟರ್‌ನೊಂದಿಗೆ ಸ್ವಾಯತ್ತ ಸಂಸ್ಥೆ ತಲಶ್ಶೇರಿಯ ಮಲಬಾರ್ ಕ್ಯಾನ್ಸರ್ ಸೆಂಟರ್ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸೈನ್ಸಸ್ ಅಂಡ್ ರಿಸರ್ಚ್ ಸಂಸ್ಥೆಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.
ಮಂಗಳಗಂಗೋತ್ರಿ ಆವರಣದಲ್ಲಿರುವ ಸಿಂಡಿಕೇಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಹಿ ಮಾಡಲಾಯಿತು.
ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡುವುದು, ಜಂಟಿಯಾಗಿ ಸಂಶೋಧನೆ ನಡೆಸುವುದು ಮತ್ತು ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು ಎರಡೂ ಸಂಸ್ಥೆಗಳ ಉದ್ದೇಶವಾಗಿವಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯವು ವೈದ್ಯಕೀಯ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ನೀಡುವ ಕರ್ನಾಟಕದ ಏಕೈಕ ರಾಜ್ಯ ವಿಶ್ವವಿದ್ಯಾಲಯವಾಗಿದೆ. ತಲಶ್ಶೇರಿಯ ಆಂಕಾಲಜಿ ಸೈನ್ಸ್ ಅಂಡ್ ರಿಸರ್ಚ್ನ ಸ್ನಾತಕೋತ್ತರ ಸಂಸ್ಥೆಯಾಯಾಗಿರುವ ಎಂಸಿಸಿ ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೊಳಪಟ್ಟಿರುವ ಸ್ವಾಯತ್ತ ಸಂಸ್ಥೆಯಾಗಿರುತ್ತದೆ. ಇದು ಕ್ಲಿನಿಕಲ್ ಆರೈಕೆ, ಶಿಕ್ಷಣ ಮತ್ತು ಆಂಕಾಲಜಿ ಸಂಶೋಧನೆಗೆ ಸಮಾನ ಒತ್ತು ನೀಡುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ “ಈ ಒಡಂಬಡಿಕೆಯಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಮಲಬಾರ್ ಕ್ಯಾನ್ಸರ್ ಕೇಂದ್ರಗಳು ತಮ್ಮಲ್ಲಿರುವ ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ವಿವಿಧ ರೀತಿಯ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ವೈದ್ಯಕೀಯ ಭೌತಶಾಸ್ತ್ರ ಸ್ನಾತಕೋತ್ತರ ಪದವಿಯ ಬೋಧನೆ ಮತ್ತು ತರಬೇತಿಗೆ ಅತ್ಯಂತ ಸಹಕಾರಿಯಾಗಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಲಬಾರ್ ಕ್ಯಾನ್ಸರ್ ಕೇಂದ್ರದ ನಿರ್ದೇಶಕ ಡಾ. ಸತೀಶನ್ ಬಿ ಅವರನ್ನೊಳಗೊಂಡ ವಿಜ್ಞಾನಿಗಳ ತಂಡ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಕೆ. ರಾಜು ಮೊಗವೀರ ಕೆ.ಎ.ಎಸ್, ಪರೀಕ್ಷಾಂಗ ಕುಲಸಚಿವ ಡಾ. ಎಚ್ ದೇವೇಂದ್ರಪ್ಪ ಉಪಸ್ಥಿತರಿದ್ದರು.