ಶಕ್ತಿ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟ
Sunday, October 12, 2025
ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.
ಈ ಕ್ರೀಡಾ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪ್ರದೀಪ್ ಡಿಸೋಜ ಅವರು ಶಕ್ತಿ ವಿದ್ಯಾ ಸಂಸ್ಥೆಯ ಶಾಲಾ ಧ್ವಜಾರೋಹಣವನ್ನು ನೆರವೇರಿಸಿ ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ, ಕ್ರೀಡೆ ಇಲ್ಲದಿದ್ದರೆ ನಮ್ಮ ಜೀವನ ಸಂಪೂರ್ಣವಾಗುವುದಿಲ್ಲ, ನಮ್ಮ ಸರ್ವಾಂಗೀನ ಅಭಿವೃದ್ಧಿಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ, ದೇಶದ ಭವಿಷ್ಯದ ಪ್ರಜೆಗಳಾಗಿ ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಪಡೆಯಬೇಕಾದರೆ ಈ ಕ್ರೀಡೆ ಸಹಾಯವಾಗುತ್ತದೆ, ಉತ್ತಮವಾದ ಜೀವನ ನಡೆಸಲು ಕ್ರೀಡೆ ಸಹಕಾರವಾಗುತ್ತದೆ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಲು, ನಾಯಕತ್ವದ ಗುಣ, ಸ್ಪರ್ಧಾ ಮನೋಭಾವ, ಕ್ರೀಡಾ ಸ್ಫೂರ್ತಿ ಎಲ್ಲವನ್ನು ಕಲಿಸಿಕೊಡುತ್ತದೆ. ಇದು ನಿರಂತರವಾದ ಪ್ರಕ್ರಿಯೆ ಅದು ಜೀವನದುದ್ದಕ್ಕೂ ರೂಢಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಸರಕಾರದ ವತಿಯಿಂದ ಶೈಕ್ಷಣಿಕವಾಗಿ ಸರಕಾರಿ ಕೆಲಸದಲ್ಲಿಯೂ ಕೂಡ ಸಾಕಷ್ಟು ಸವಲತ್ತುಗಳು ಸಿಗುತ್ತವೆ. ಇವತ್ತಿನ ಈ ವಿಶೇಷವಾದ ಕ್ರೀಡಾ ಕೂಟವು ಯಶಸ್ವಿಯಾಗಲಿ ಆರೋಗ್ಯಧಾಯಕ ಸ್ಪರ್ಧಾ ಮನೋಭಾವ ಮಕ್ಕಳು ಬೆಳೆಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ಪ್ರದೀಪ ಡಿಸೋಜ ಅವರು ಅನೇಕ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೀಡಾಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾವನ್ನು ನೀಡುತ್ತಾ ಬಂದವರು. ನಮ್ಮ ಶಾಲೆಯಲ್ಲಿ ಮಕ್ಕಳು ವರ್ಷದಿಂದ ವರ್ಷಕ್ಕೆ ಸಾಕಷ್ಟು ಕ್ರೀಡೆಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ಕ್ರೀಡೆ ನಿರಂತರವಾದ ಪ್ರಕ್ರಿಯೆಯಾಗಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿಯೂ ಕೂಡ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಮ್ಮ ಶಾಲಾ ಕ್ರೀಡಾ ಶಿಕ್ಷಕರ ತರಬೇತಿಯಿಂದ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭಾರತೀಯ ವತಿಯಿಂದ ಮತ್ತು ಇನ್ನು ಅನೇಕ ಸ್ಪರ್ಧಾ ಕೂಟಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸಿದ್ದಾರೆ. ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ. ನಾಕ್ ಅವರು ಕ್ರೀಡಾ ಕ್ಷೇತ್ರಕ್ಕೆ ಬೇಕಾದ ಸಕಲ ಸೌಲಭ್ಯವನ್ನು ನೀಡುತ್ತಾ ಬಂದಿದ್ದಾರೆ. ಇವತ್ತಿನ ಈ ವಾರ್ಷಿಕ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುತ್ತ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುತ್ತ ಈ ಕ್ರೀಡಾ ಕೂಟವನ್ನು ಯಶಸ್ವೀಗೊಳಿಸೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ನಟೇಶ್ ಆಳ್ವ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕೀರ್ತನಾ ಬೇಕಲ್, ಸಾಗರ್, ದೇಹಿಕಾ, ಸಿದ್ಧಿವಿನಾಯಕ್ ಭಟ್, ವಿವಾನ ಸಾಗರ್ ಶೆಟ್ಟಿ ಅವರು ಕ್ರೀಡಾಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು.
ಅಗ್ನಿ ವಾಯು, ಜಲ, ಪೃಥ್ವಿ ನಾಮಾಂಕಿತ ದಳಗಳಲ್ಲಿ ವಿದ್ಯಾರ್ಥಿಗಳಿಂದ ಪಥ ಸಂಚಲನವು ನಡೆಯಿತು. ಕುಮಾರಿ ಹರ್ಷಿತ ಕ್ರೀಡಾ ಪ್ರತಿಜ್ಞೆಯನ್ನು ವಾಚಿಸಿದರು. ಅಶ್ವಿನಿ ಅಂಚನ್ ಅವರು ಸ್ವಾಗತಿಸಿದರು. ಶಿಕ್ಷಕಿ ಚೇತನ ತಲಪಾಡಿ ನಿರೂಪಿಸಿ ವಂದಿಸಿದರು.












