ಧರ್ಮಸ್ಥಳ ಪ್ರಕರಣ: ಪೊಲೀಸರಿಗೂ ತಟ್ಟಿದ ತನಿಖೆಯ ಬಿಸಿ
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 1995 ರಿಂದ 2014ರ ವರೆಗೆ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ತನಿಖೆಗೆ ಮುಂದಾಗಿದೆ.
ಈ ಅವಧಿಯಲ್ಲಿ ಆತ್ಮಹತ್ಯೆ ನಡೆಸಿದ ವ್ಯಕ್ತಿಗಳ ಶವಗಳ ವಿಲೇವಾರಿ ವೇಳೆ ಅಕ್ರಮವಾಗಿದೆ ಎಂದು ಆರೋಪಿಸಿ ದೂರುದಾರ ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ, ಮಹೇಶ್ ಶೆಟ್ಟಿ ತಿಮರೋಡಿ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ಅಂದು ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರನ್ನು ಕರೆಸಿಕೊಂಡಿದೆ.
ಸದ್ಯ ವಿವಿಧ ಠಾಣೆಗಳಲ್ಲಿ ಈ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶವ ವಿಲೇವಾರಿ ದಾಖಲೆ ಪರಿಶೀಲನೆ ವೇಳೆ ಗೊಂದಲ ಕಂಡುಬಂದಿದ್ದು, ಈ ಪೊಲೀಸರ ಮೇಲೆ ಅರಣ್ಯ ಭೂಮಿಯಲ್ಲಿ ಶವ ದಫನ ಮಾಡಿರುವ ಆರೋಪ ಸೇರಿದಂತೆ ಆತ್ಮಹತ್ಯೆ ಮಾಡಿಕೊಂಡವರ ಶವಗಳನ್ನು ಒಂದೇ ದಿನದಲ್ಲಿ ದಫನ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳ ಔಟ್ ಪೋಸ್ಟ್‌ನಲ್ಲಿ ಆಗ ಕರ್ತವ್ಯದಲ್ಲಿದ್ದ ಬಹುತೇಕ ಎಲ್ಲ ಪೊಲೀಸರಿಗೂ ಎಸ್‌ಐಟಿ ಬುಲಾವ್ ಮಾಡಿದ್ದು, ಅವರಿಂದ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭಿಸಲಾಗಿದೆ.
ಜೈಲಿನಿಂದ ವಿಚಾರಣೆ ಸಾಧ್ಯತೆ..
ಒಂದೇ ಜಾಗದಲ್ಲಿ 10 ಶವ ಹೂತಿದ್ದೇನೆ ಎಂದಿದ್ದ ಬುರುಡೆ ಕೇಸಿನ ಆರೋಪಿ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬಿಎನ್‌ಎಸ್ ೧೮೩ ಅಡಿಯಲ್ಲಿ ಈ ಹೇಳಿಕೆ ನೀಡಿದ್ದ. ಹಾಗಾಗಿ ಸದ್ಯ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನನ್ನು ಕೋರ್ಟ್ ಅನುಮತಿ ಪಡೆದು ಶಿವಮೊಗ್ಗ ಜೈಲಿನಲ್ಲೇ ಎಸ್‌ಐಟಿ ತಂಡ ವಿಚಾರಣೆ ನಡೆಸುವ ಸಾಧ್ಯತೆ
ಇದೆ. ಆರೋಪಿ ಚಿನ್ನಯ್ಯ 10 ಶವ ಹೂತು ಹಾಕಿದ್ದು ಯಾವಾಗ ಎಂದು ಪತ್ತೆ ಹಚ್ಚಲು ಎಸ್‌ಐಟಿ ತಂಡ ದಾಖಲೆಗಳ ಹುಡುಕಾಟ ನಡೆಸುತ್ತಿದೆ.