ತಲೆಮರೆಸಿಕೊಂಡಿರುವ ಪ್ರಕರಣ: ಆರೋಪಿಗಳ ಜಾಮೀನುದಾರರ ವಿರುದ್ಧ ಕ್ರಮ
ಅದರಂತೆ ಕಳೆದೊಂದು ತಿಂಗಳಿನಿಂದ 5 ಅಪರಾಧ ಪ್ರಕರಣಗಳಲ್ಲಿ ಭದ್ರತೆಗಾಗಿ ಇರಿಸಲಾಗಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. 2 ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯ ದಂಡ ವಿಧಿಸಿದೆ. 4 ಪ್ರಕರಣಗಳ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಕಾರ್ಯಾಚರಣೆ ಆರಂಭವಾದ ಬಳಿಕ 2 ಪ್ರಕರಣಗಳಲ್ಲಿ ಆರೋಪಿಗಳು ಸ್ವತಃ ನ್ಯಾಯಾಲಯಕ್ಕೆ ಶರಣಾಗಿರುತ್ತಾರೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಳಿಕ ಕೆಲವು ಪ್ರಕರಣಗಳ ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು ಈ ಆರೋಪಿಗಳ ಪರವಾಗಿರುವ ಜಾಮೀನುದಾರರು ಭದ್ರತೆಯ ಆಧಾರವಾಗಿ ನೀಡಿದ ಜಮೀನು/ಸೊತ್ತು ವಿವರಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೆ ನ್ಯಾಯಾಲಯದ ಆದೇಶ ಪಡೆದು ಜಾಮೀನುದಾರರಿಗೆ ಸಂಬಂಧಿಸಿದ ಸೊತ್ತುಗಳನ್ನು ಮುಟ್ಟುಗೋಲು ಹಾಕಲು ಮತ್ತು ದಂಡ ವಸೂಲಿ ಮಾಡಲು ಕ್ರಮಕೈಗೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ.
ಮುಟ್ಟುಗೋಲು ಮಾಡಲಾಗಿರುವ ಆಸ್ತಿಯ ಆರ್ಟಿಸಿಯಲ್ಲಿ ವಿವರಗಳನ್ನು ನಮೂದಿಸಲಾಗಿದೆ. ಕೆಲವು ಪ್ರಕರಣ ಗಳಲ್ಲಿ ಮುಟ್ಟುಗೋಲು ಪ್ರಕ್ರಿಯೆಗಳು ಚಾಲ್ತಿಯಲ್ಲಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.