‘ತಪ್ಪು ಮಾಡಿದ್ದೇನೆ ಮಂಜುನಾಥ ಸ್ವಾಮಿ, ವೀರೇಂದ್ರ ಹೆಗ್ಗಡೆಯವರಲ್ಲಿ ಕ್ಷಮೆ ಕೇಳುತ್ತೇನೆ’: ಸುಜಾತ ಭಟ್
ಮಂಗಳೂರು: ‘ನಾನು ತಪ್ಪು ಮಾಡಿದ್ದೇನೆ. ಮಂಜುನಾಥ ಸ್ವಾಮಿ ಬಳಿ ನಾನು ಕ್ಷಮಾಪಣೆ ಕೇಳುತ್ತೇನೆ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಸುಜಾತ ಭಟ್ ಹೇಳಿದ್ದಾರೆ.
ಖಾಸಗಿ ದೃಶ್ಯವಾಹಿನಿಗೆ ಈ ಕುರಿತು ಹೇಳಿಕೆ ನೀಡಿರುವ ಅವರು, ಬುರುಡೆ ತಂಡದ ಜೊತೆ ಹೋಗಿ ನಾನು ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಿದೆ. ಹಾಗಾಗಿ ನಾನು ಧರ್ಮಸ್ಥಳಕ್ಕೆ ಹೋಗಿ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ನನಗೆ ಈಗ ಜೀವನ ನಡೆಸುವುದು ಕಷ್ಟವಾಗಿದೆ. ನನಗೆ ಮೊಬೈಲ್ ಭಾಗ್ಯ, ವಾಚ್ ಭಾಗ್ಯ, ದುಡ್ಡಿನ ಭಾಗ್ಯ ಎಂದು ಹೇಳುತ್ತಾರೆ. ಸಹಾಯ ಮಾಡುವುದೇ ತಪ್ಪು ಎಂದಾದರೆ ಮಾನವೀಯತೆ ಎಲ್ಲಿದೆ? ಅನನ್ಯ ಭಟ್ , ಬುರುಡೆ ಗ್ಯಾಂಗ್ ಎಲ್ಲದಕ್ಕೂ ನಾನು ಪೂರ್ಣ ವಿರಾಮ ಇಟ್ಟಿದ್ದೇನೆ ಎಂದು ತಿಳಿಸಿದರು.
ವಾಸಂತಿ ನಾಪತ್ತೆ ಪ್ರಕರಣದಲ್ಲಿ ನಟನ ಸಹೋದರ ಇರುವುದು ನಿಜ, ಈ ಪ್ರಕರಣದಲ್ಲಿ ಸಹೋದರ ಎ2 ಆರೋಪಿ. ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ವಾಸಂತಿ ಶವ ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡಿತ್ತು. ವಾಸಂತಿ ಹಾಗೂ ನಟನ ಸಹೋದರನ ನಡುವಿನ ಸಂಬಂಧ ಏನು ಎಂದು ಗೊತ್ತಿಲ್ಲ ಎಂದಿದ್ದಾರೆ.
ಹೇಳಿಕೆ ದಾಖಲು ಪ್ರಕ್ರಿಯೆ...
ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ತಂಡ ಸಾಕ್ಷಿದಾರರ ಕರೆಸಿ ಅಂತಿಮ ಹೇಳಿಕೆ ದಾಖಲು ಪ್ರಕ್ರಿಯೆ ನಡೆಸುತ್ತಿದೆ.ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಇದರೊಂದಿಗೆ ಎಸ್‌ಐಟಿ ತನಿಖೆ ಪ್ರಮುಖ ಘಟ್ಟಕ್ಕೆ ತಲುಪಿದಂತಾಗಿದೆ. ಇದೇ ವೇಳೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅ.8 ರಂದು ಎಸ್‌ಐಟಿ ಕಚೇರಿಗೆ ಆಗಮಿಸುವ ಸಾಧ್ಯತೆ ಇದೆ.
ಜುಲೈ 25ರಿಂದ ಈ ವರೆಗಿನ ಎಸ್‌ಐಟಿ ತನಿಖೆಯ ವರದಿ ತಯಾರಿ ಪ್ರಕ್ರಿಯೆ ಆರಂಭಗೊಂಡಿದೆ. ಹೀಗಾಗಿ ದಾಖಲೆ ಸೇರಿ ಹಲವು ಸಾಕ್ಷ್ಯ ಹಾಗೂ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಅಸ್ಥಿಪಂಜರ ಸಿಕ್ಕ ಜಾಗಗಳು, ಸ್ಥಳ ಪರಿಶೋಧನೆ ನಡೆದ ಜಾಗಗಳ ಕಾನೂನಾತ್ಮಕ ದಾಖಲು ಪ್ರಕ್ರಿಯೆ ನಡೆಸಲಾಗಿದೆ. ಅರಣ್ಯ, ಕಂದಾಯ, ಲೋಕೋಪಯೋಗಿ ಇಲಾಖೆಗಳ ಸರ್ವೇ ನಡೆಸಿ ಅಧಿಕೃತ ದೃಢೀಕರಣ ನಡೆಸಲಾಗಿದೆ. ಅಂತಿಮ ವರದಿ ಹಾಗೂ ಚಾರ್ಜ್ ಶೀಟ್‌ನಲ್ಲಿ ಜಾಗಗಳ ಮಾಲೀಕತ್ವ ದೃಢೀಕರಿಸುವುದನ್ನು ನಡೆಸಲಾಗುತ್ತಿದೆ.