ಸಮೀಕ್ಷೆ ವಿರೋಧಿಸುವುದು ಜನವಿರೋಧಿ ಕೃತ್ಯ: ಸುದರ್ಶನ್
ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆ ವಿರೋಧಿಸುವುದು ಜನವಿರೋಧಿ ಕೃತ್ಯ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಲೋಪದೋಷಗಳು ಸಹಜ. ಅದನ್ನು ಸಂಬಂಧಪಟ್ಟವರ ಗಮನಹರಿಸಿ ಸರಿಪಡಿಸಬೇಕು. ಪ್ರಹ್ಲಾದ್ ಜೋಶಿಯವರಂತಹ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಬಿಜೆಪಿ ನಾಯಕರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುವುದು ಬೇಜವಾಬ್ಧಾರಿಯ ನಡೆ. ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ 200 ಸಮುದಾಯಗಳಿವೆ. ಪ್ರಥಮ ಸಭೆ ಮಂಗಳೂರಿನಲ್ಲಿ ನಡೆಸಲಾಗಿದೆ. ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರು ರಾಜಕೀಯ ಕಾರಣಗಳಿಗೋಸ್ಕರ ಮಾತ್ರವೇ ವಿರೋಧಿಸುತ್ತಿದ್ದಾರೆ. ಸಮೀಕ್ಷೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನಡೆಯುತ್ತಿದೆ. ಇಂತಹ ವಿರೋಧ ಸಂವಿಧಾನ ಹಾಗೂ ಜನ ವಿರೋಧಿ ಕೃತ್ಯ ಎಂದವರು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿ ಅಲ್ಲ. ಅದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿದೆ. ಹಿಂದುಳಿದ ವರ್ಗಗಳ ಸಮುದಾಯಗಳಲ್ಲಿ ಸಂವಿಧಾನ ಬದ್ಧ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 10 ವರ್ಷಗಳಿಗೊಮ್ಮೆ ನಡೆಸಲಾಗುವ ಸಮೀಕ್ಷೆ ಇದಾಗಿದೆ ಎಂದು ಸುದರ್ಶನ್ ಹೇಳಿದರು.
ಕೇಂದ್ರ ಸರಕಾರ ಕೊನೆಗೂ ಜನಗಣತಿಗೆ ಮುಂದಾಗಿದೆ. 2021ರಲ್ಲಿ ಜನಗಣತಿ ಆಗಬೇಕಾಗಿತ್ತು. ಕೋವಿಡ್ ಕಾರಣ ಹೇಳಿ ವಿಳಂಬವಾಗಿದೆ. ತಡವಾದರೂ ಜನಗಣತಿ ಮುಂದಾಗಿರುವುದು ಸ್ವಾಗತಾರ್ಹ ಎಂದವರು ಹೇಳಿದರು.