
ಯುವಕ ಮಂಡಲಗಳಿಂದ ಒಗ್ಗಟ್ಟಿನ ಸಂದೇಶ: ಅಕ್ಷಯ ಶೆಟ್ಟಿ ಪೆರಾರ
ಮಿತ್ತಕೊಲಪಿಲದಲ್ಲಿ ತುಳು ವಿಚಾರ ಗೋಷ್ಠಿ-ಕವಿಗೋಷ್ಠಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ರಾಘವೇಂದ್ರ ಯುವಕ ಮಂಡಲದ ಸಹಯೋಗದಲ್ಲಿ ಭಾನುವಾರ ಮೂಡುಪೆರಾರದ ಮಿತ್ತಕೊಲಪಿಲದಲ್ಲಿರುವ ಶ್ರೀ ರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ಆಯೋಜಿಸಿದ್ದ ತುಳು ವಿಚಾರ ಗೋಷ್ಠಿ ಮತ್ತು ತುಳು ಕವಿಗೋಷ್ಠಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತುಳು ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಆಯೋಜಿಸುವ ಮೂಲಕ ತುಳು ಭಾಷೆಯ ಬಗ್ಗೆ ಶ್ರೀ ರಾಘವೇಂದ್ರ ಭಜನಾ ಮಂದಿರ ಎಷ್ಟು ಅಭಿಮಾನವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ. ಭಾಷೆಯ ಕುರಿತು ವಿವಿಧ ಕಾರ್ಯಕ್ರಮಗಳು ನಡೆಯಬೇಕು. ಈ ನಿಟ್ಟಿನಲ್ಲಿ ಶ್ರೀ ರಾಘವೇಂದ್ರ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದರು.
ಭಾರತ ಹಳ್ಳಿಗಳ ದೇಶ. ವೈಚಾರಿಕತೆಯನ್ನು ನಾವು ಬೆಳೆಸಬೇಕು. ಹಳ್ಳಿಗಳಲ್ಲಿನ ಸಂಘ ಸಂಸ್ಥೆಗಳೇ ಅಲ್ಲಿನ ಜೀವಾಳ. ಆಯಾ ಊರಿನ ಯುವಕ ಮಂಡಲಗಳ ಮೂಲಕ ಉತ್ತಮ ಕಾರ್ಯಗಳಾಗಬೇಕು. ಯುವಕ ಮಂಡಲದಂತಹ ಸಂಘಟನೆಯಲ್ಲಿ ಎಲ್ಲರೂ ಒಂದೇ ಮಾನಸಿಕತೆಯಿಂದ ತೊಡಗಿಕೊಳ್ಳುವುದರಿಂದ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಘವೇಂದ್ರ ಯುವಕ ಮಂಡಲ ದಿಟ್ಟ ಹೆಜ್ಜೆ ಇಟ್ಟಿದೆ. ಈ ಯುವಕ ಮಂಡಲ ರಾಜ್ಯಕ್ಕೆ ಮಾದರಿಯಾಗಿ ಬೆಳೆಯಲಿ ಎಂದು ಅಕ್ಷಯ ಶೆಟ್ಟಿ ಆಶಿಸಿದರು.
ಶುಭಾಸಂಶನೆಗೈದ ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ದೈವದ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಅಳಿಕೆಗುತ್ತು ಮಾತನಾಡಿ, ಸಾಹಿತ್ಯ ವಿಚಾರಗೋಷ್ಠಿ, ಕವಿಗೋಷ್ಠಿಯತ್ತ ಮಕ್ಕಳು ಸೇರಿದಂತೆ ಯುವ ಸಮೂಹ ಹೆಚ್ಚಿನ ಒಲವು ತೋರಬೇಕು. ನಮ್ಮ ಸಂಸ್ಕೃತಿ ಪರಂಪರೆ ಉಳಿಯಲು ವಿಚಾರಗೋಷ್ಠಿಯಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.
ಬದಲಾದ ಕಾಲಘಟ್ಟದಲ್ಲಿ ಜನತೆ ಹಾಸ್ಯ, ಮನರಂಜನೆಯಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದರ ಜೊತೆಗೆ ನಮ್ಮ ಭಾಷೆ, ಸಂಸ್ಕೃತಿಗೆ ಸಂಬಂಸಿದ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯುವ ಜನತೆಯಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರೀ ರಾಘವೇಂದ್ರ ಭಜನಾ ಮಂಡಳಿ ಆಯೋಜಿಸುತ್ತಿರುವ ಕಾರ್ಯಕ್ರಮಗಳು ಮಾದರಿಯಾದುದು ಎಂದವರು ವಿವರಿಸಿದರು.
ಮಿತ್ತಕೊಲಪಿಲ ಶ್ರೀ ರಾಘವೇಂದ್ರ ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಪೂಜಾರಿ ಬೋರುಗುಡ್ಡೆ ಅಧ್ಯಕ್ಷತೆ ವಹಿಸಿದ್ದರು.
ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ವಿಶ್ವನಾಥ ಪೂಜಾರಿ ರೇಂಜಾಳ ಉಪನ್ಯಾಸ ನೀಡಿದರು.
ಶ್ರೀ ಬಲವಾಂಡಿ ಕ್ಷೇತ್ರ ಮಾವಂತೂರಿನ ಗಡಿಕಾರರಾದ ಶ್ರೀ ದುರ್ಗಾದಾಸ್ ಶೆಟ್ಟಿ, ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಅಮೀನ್, ಪಡುಪೆರಾರ ಗ್ರಾ.ಪಂ.ಸದಸ್ಯ ದೇವಪ್ಪ ಶೆಟ್ಟಿ ಕೊಕ್ಕಾರು, ಜವನೆರ್ ಪೆರಾರ ಇದರ ಅಧ್ಯಕ್ಷ ಮೋಹನ್ ಶೆಟ್ಟಿ ಮರೋಳಿ, ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ನಾರಾಯಣ ಗೌಡ, ಹಿರಿಯ ಮೂರ್ತೆದಾರರಾದ ಶೀನ ಪೂಜಾರಿ ಕಟ್ಟದಬರಿ, ಸೂಕ್ತ ನ್ಯೂಸ್ ಚಾನೆಲ್ ಮುಖ್ಯಸ್ಥ ಪ್ರದೀಪ್ ಪೂಜಾರಿ ಕುಕ್ಕಿಪಾಡಿ, ರಾಘವೇಂದ್ರ ಯುವಕ ಮಂಡಲದ ಸಂಚಾಲಕ ದುರ್ಗಾಪ್ರಸಾದ್ ಶೆಟ್ಟಿ ಕೊಳಪಿಲ ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಕುಮಾರ್ ಪೆರಾರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತುಳುನಾಡಿನ ಹೆಸರಾಂತ ಕವಿಗಳಿಂದ ಕವಿಗೋಷ್ಠಿ ನಡೆಯಿತು.
ಕುಶಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅಕ್ಷತಾ ರಾಜ್ ಪೆರ್ಲ, ಅಕ್ಷಯ ಆರ್. ಶೆಟ್ಟಿ ಪೆರಾರ, ವಿಜಯಲಕ್ಷ್ಮೀ ಕಟೀಲ್, ಪದ್ಮನಾಭ ಮಿಜಾರ್, ನವೀನ್ ಕುಮಾರ್ ಪೆರಾರ, ರಂಜಿತ್ ಸಸಿಹಿತ್ಲು ಇವರು ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.