ಅಸಹಜ ಸಾವಿನ ಕುರಿತು ತನಿಖೆ ನಡೆಸುವಂತೆ ಎಸ್‌ಐಟಿಗೆ ಸೌಜನ್ಯ ಪರ ಹೋರಾಟಗಾರರು ದೂರು
ಮಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ದ.ಕ. ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ರದ್ದುಗೊಂಡ ಹಿನ್ನೆಲೆಯಲ್ಲಿ ತಲೆಮರೆಸಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿರುವಂತೆಯೇ ಇತ್ತ ಸೌಜನ್ಯ ಪರ ಹೋರಾಟಗಾರರ ತಂಡ ಬೆಳ್ತಂಗಡಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಕಚೇರಿಗೆ ಶನಿವಾರ ಆಗಮಿಸಿ ಅಸಹಜ ಸಾವುಗಳ ಕುರಿತು ತನಿಖೆ ನಡೆಸುವಂತೆ ದೂರು ನೀಡಿದೆ.
ಸೌಜನ್ಯ ಪರ ಹೋರಾಟಗಾರರರಾದ ಗಿರೀಶ್ ಮಟ್ಟೆಣ್ಣವರ್, ಜಯಂತ್, ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ 12 ಮಂದಿಯ ತಂಡ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಎಸ್‌ಐಟಿ ಕಚೇರಿಗೆ ತೆರಳಿ ದೂರು ನೀಡಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಗಿರೀಶ್ ಮಟ್ಟೆಣ್ಣವರ್, ಕಳೆದ ನಾಲ್ಕೈದು ದಶಕಗಳಿಂದ ಅಸಹಜ ಸಾವುಗಳು ನಡೆಯುತ್ತಿವೆ. ಆದರೆ ಆರೋಪಿಗಳು ಯಾರು ಎನ್ನುವುದನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗಳು ವಿಫಲವಾಗಿವೆ. ಯಾವ ಪ್ರಕರಣಕ್ಕೂ ತಾರ್ಕಿಕ ಅಂತ್ಯ ಎಂಬುವುದು ಆಗಿಲ್ಲ. ವೇದವಲ್ಲಿ, ಪದ್ಮಲತಾ, ಸೌಜನ್ಯ ಕುಟುಂಬಸ್ಥರು ದೂರು ನೀಡಿದ್ದೇವೆ. ಈ ಪ್ರಕರಣಗಳ ಬಗ್ಗೆ ಪ್ರತ್ಯೇಕ ಕೇಸು ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ ಎಂದರು.
ಈ ಬಗ್ಗೆ ಎಫ್‌ಐಆರ್ ಇಲ್ಲದೆ ಸಾಕಷ್ಟು ಪ್ರಕರಣಗಳು ನಡೆದಿದೆ. ಮೃತದೇಹ ಸಿಕ್ಕಿದ ದಿನವೇ ಆ ಮೃತದೇಹವನ್ನು ದಹನ ಮಾಡಿದ್ದಾರೆ. ಪಂಚಾಯತ್ ಈ ದಾಖಲೆಗಳ ನ್ನು ನೀಡಿದೆ. ದಾಖಲೆಗಳ ಆಧಾರದಲ್ಲಿ ದೂರು ನೀಡಿದ್ದೇವೆ. ಪ್ರತ್ಯೇಕ ಕೇಸು ದಾಖಲಿಸಲು ಮನವಿ ಮಾಡಿದ್ದೇವೆ. ಎಸ್‌ಐಟಿ ವ್ಯಾಪ್ತಿಗೆ ಬರುವಂತೆ ಕೇಸು ದಾಖಲಿಸಲು ಕೋರಲಾಗಿದೆ ಎಂದರು.
ಈ ಅಸಹಜ ಸಾವುಗಳ ಕುರಿತು ಎಲ್ಲ ರಾಜ್ಯದ ಹೈಕೋರ್ಟ್‌ಗಳಿಗೆ ದೂರು ನೀಡಲಾಗುವುದು. ನಮ್ಮ ಆರೋಪಗಳು ಸುಳ್ಳಾದರೆ ತನಿಖೆ ಎದುರಿಸುತ್ತೇವೆ. ಎಸ್‌ಐಟಿ ಅದಿ ಕಾರಿಗಳು ನಮಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಚಿನ್ನಯ್ಯ ಅನಾಥ ಶವ ಹೂತಿರುವ ಬಗ್ಗೆ ಕೋರ್ಟ್‌ಗೆ ಹೇಳಿಕೆ ನೀಡಿದ್ದಾನೆ. ಆದರೆ ಏಕಾಏಕಿ ಈಗ ಉಲ್ಟಾ ಹೊಡೆದಿ ದ್ದಾನೆ. ಚಿನ್ನಯ್ಯನ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ ಎಂದರು.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆರ್ಮ್ ಆ?ಯಕ್ಟ್ ಪ್ರಕರಣದಲ್ಲಿ ಕೇಸು ದಾಖಲಿಸಿದ್ದಾರೆ. ಅವರ ಮನೆಯ ಗೋಡೌನ್‌ನಲ್ಲಿ ಐದಾರು ವರ್ಷದಿಂದ ಬಳಸದೇ ಇದ್ದ ಏರ್‌ಗನ್‌ನ್ನು ಎಕೆ 47 ರೀತಿಯಲ್ಲಿ ವೈಭವೀಕರಿಸಿದ್ದಾರೆ. ಕೃಷಿಕರು ಬಳಸುವ ಏರ್‌ಗನ್ ಮಹೇಶ್ ಶೆಟ್ಟಿ ಮನೆಯ ಗೋಡೌನ್‌ನಲ್ಲಿತ್ತು. ಮುಂದೆ ಮನೆಯಲ್ಲಿ ತರಕಾರಿ ಕಟ್ ಮಾಡುವ ಚೂರಿ ಇಟ್ಟುಕೊಳ್ಳಲೂ ಹಿಂಜರಿಯಬೇಕು ಎಂದರು.
ತಲೆಬುರುಡೆಗಳು ಎಫ್‌ಎಸ್‌ಎಲ್‌ಗೆ:
ಬಂಗ್ಲೆಗುಡ್ಡೆ ಅರಣ್ಯದಲ್ಲಿ ಪತ್ತೆಯಾಗಿದ್ದ ಏಳು ಬುರುಡೆ ಹಾಗೂ ಅಸ್ಥಿಪಂಜರಗಳ ತನಿಖೆಯನ್ನು ಎಸ್‌ಐಟಿ ತಂಡ ಚುರುಕುಗೊಳಿಸಿದೆ. ಇವುಗಳನ್ನು ವಿಧಿವಿಜ್ಞಾನ(ಎಫ್‌ಎಸ್‌ಎಲ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೇ ವೇಳೆ ಎಸ್‌ಐಟಿ ಉಜಿರೆಯ ಖಾಸಗಿ ಕ್ಲಿನಿಕ್‌ಗೆ ತೆರಳಿ ಪರಿಶೀಲನೆ ಕಾರ್ಯ ನಡೆಸಿದೆ. ಎಫ್‌ಎಸ್‌ಎಲ್ ವಿಭಾಗದ ಸೋಕೋ ತಂಡ ಮತ್ತು ಸರ್ಕಾರಿ ಪಂಚರು ತೆರಳಿ ತನಿಖೆ ಕೈಗೊಂಡಿದ್ದಾರೆ.