ಪರಿಸರ ಸಂರಕ್ಷಣೆಯ ಕುರಿತು ರೀಲ್ಸ್: ಬಹುಮಾನ ಪ್ರಕಟ
ಮಂಗಳೂರು: (ಕೆಎಸ್‌ಪಿಸಿಬಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು 60 ಸೆಕೆಂಡುಗಳ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಭಾಗವಹಿಸುವವರು ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಅದನ್ನು ಕೆಎಸ್‌ಪಿಸಿಬಿ ಸಾಮಾಜಿಕ ಮಾಧ್ಯಮ ಘಟಕಕ್ಕೆ ಟ್ಯಾಗ್ ಮಾಡಬೇಕು.
ವಿಜೇತರಿಗೆ ಕ್ರಮವಾಗಿ 50 ಸಾವಿರ ರೂ., 25 ಸಾವಿರ ರೂ. ಮತ್ತು 10 ಸಾವಿರ ರೂ. ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಡ್ಯಾರಿನಲ್ಲಿ ಸೋಮವಾರ ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಕಟಿಸಿದೆ.
ಪಿಲಿಕುಳ ನಿಸರ್ಗಧಾಮದಲ್ಲಿ ಅರ್ಬನ್ ಇಕೋ ಪಾರ್ಕ್ ಯೋಜನೆ ಪೂರ್ಣಗೊಳಿಸಲು ಮನವಿ:
ಪಿಲಿಕುಳ ನಿಸರ್ಗಧಾಮದಲ್ಲಿ ಅರ್ಬನ್ ಇಕೋ ಪಾರ್ಕ್ ಯೋಜನೆ ಪೂರ್ಣಗೊಳಿಸಲು ಬಾಕಿ ಇರುವ 13 ಕೋಟಿ ರೂ.ಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಒತ್ತಾಯಿಸಿದರು.
2014ರಲ್ಲಿ ಅರ್ಬನ್ ಇಕೋ ಪಾರ್ಕ್ ಸ್ಥಾಪಿಸಲು ಒಟ್ಟು 18 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ ಆರಂಭದಲ್ಲಿ 5 ಕೋಟಿ ರೂ. ಬಿಡುಗಡೆಯಾಗಿತ್ತು. ಬಾಕಿ ಉಳಿದ 13 ಕೋಟಿ ರೂ. ಬಿಡುಗಡೆ ಮಾಡಿದರೆ, ಯೋಜನೆ ಮುಂದುವರಿಸಲು ಅನುಕೂಲವಾಗಲಿದೆ ಎಂದರು.
ಇದಲ್ಲದೆ, ಜಿಲ್ಲೆಯ ಪರಿಸರ ಸಂರಕ್ಷಣೆಗಾಗಿ ಶ್ರೇಷ್ಠತಾ ಕೇಂದ್ರವನ್ನು ಮಂಜೂರು ಮಾಡುವಂತೆಯೂ ಅವರು ನರೇಂದ್ರ ಸ್ವಾಮಿ ಅವರಿಗೆ ಮನವಿ ಮಾಡಿದರು.