ಕೆಂಪು ಕಲ್ಲು ಮತ್ತು ಮರಳು ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನೆ
ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಚಂದ್ರಹಾಸ ಪಿಲಾರ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅನಗತ್ಯ ಕಿರುಕುಳ ನೀಡುವುದರ ಬದಲು ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ನೀಡಬೇಕಾದ ಸವಲತ್ತನ್ನು ಸರಳವಾಗಿ ಮತ್ತು ಸರಾಗವಾಗಿ ನೀಡುತ್ತಿರಬೇಕು. ಹಾಗೆನೇ ಜಿಲ್ಲಾಡಳಿತದ ಕಾನೂನು ಕ್ರಮ ಕಟ್ಟುನಿಟ್ಟಿನ ನಿಯಮಗಳು ಅಭಿನಂದನಾರ್ಹವಾಗಿದ್ದರೂ ಕೆಂಪು ಕಲ್ಲು ಮತ್ತು ಮರಳು ಲಭ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾದರೆ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.
ಈ ರೀತಿಯ ಕಾನೂನು ಕ್ರಮಗಳಿಂದ ಜನಸಾಮಾನ್ಯರಿಗೆ ತೊಂದರೆಗಳಾದರೆ ಅದರ ಲಾಭವನ್ನು ದುಷ್ಕರ್ಮಿಗಳೇ ಪಡೆಯುತ್ತಾರೆ. ಆದುದರಿಂದ ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮುಂದುವರಿಯಬೇಕೆಂದು ಅವರು ಹೇಳಿದರು.
ವಲಸೆ ಕಾರ್ಮಿಕರಾದ ಬಿಹಾರದ ಅಲ್ತಾಪ್ ಮಾತನಾಡಿ, ಕೆಲಸಕ್ಕಾಗಿ ಅಲೆದಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ನಾವು ಕೆಲಸವಿಲ್ಲದೆ ಬಿಕಾರಿಗಳಾಗಿದ್ದೇವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಅಸ್ಸಾಂನಿಂದ ನಾವುಗಳು ಇಲ್ಲಿ ಬಂದು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ. ಕೆಲಸವಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ವಿನಂತಿಸಿದರು.
ಫೆಡರೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಹೋರಾಟವನ್ನು ಅಪಹಾಸ್ಯ ಮಾಡುವುದು ಬೇಡ. ರಾಜ್ಯ ಸರಕಾರ, ವಿರೋಧ ಪಕ್ಷದ ಶಾಸಕರು ಮೋಸ ಮಾಡುವ ಬದಲು ನೈಜ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು. ಸಿಐಟಿಯು ಸಂಘಟನೆ ಕಳೆದ ಮೂರುವರೆ ತಿಂಗಳಲ್ಲಿ ಇದು ನಾಲ್ಕನೇ ಹಂತದ ಹೋರಾಟ. ಇನ್ನೂ ಸಮಸ್ಯೆ ಬಗೆಹರಿಯದಿದ್ದರೆ ತೀವ್ರ ತರದ ಹೋರಾಟವನ್ನು ನಡೆಸಲಾಗುವುದು. ರಸ್ತೆ ತಡೆ, ಪಿಕೆಟಿಂಗ್ ಚಳುವಳಿಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗಬಹುದು.
ಕೆಲಸವಿಲ್ಲದ ಕಾರ್ಮಿಕರಿಗೆ ಅವರ ದುಡ್ಡಿನಲ್ಲಿಯೇ ಪರಿಹಾರ ನೀಡಬೇಕು. ಜನಪ್ರಿಯ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಡಳಿಯಿಂದ ಆಕರ್ಷಕ ಯೋಜನೆಗಳ ಹೆಸರನ್ನು ನೀಡಿ ಬೇರೆ ಬೇರೆ ಯೋಜನೆ ತಯಾರಿಸುವ ಕಾರ್ಮಿಕ ಇಲಾಖೆ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗುವಾಗ ಅವರಿಗೆ ಬದುಕಲು ಗ್ಯಾರಂಟಿ ಹಣ 10,000 ರೂ.ದಂತೆ ಮಾಸಿಕವಾಗಿ ನೀಡಬೇಕೆಂದು ಅವರು ಒತ್ತಾಯಿಸಿದರು.
ಜನಜಾಗೃತಿಗಾಗಿ ಮಂಗಳೂರು ನಗರಕ್ಕೆ ಜಿಲ್ಲೆಯ ವಿವಿಧ ಮೂಲೆಗಳಿಂದ ಕಾಲ್ನಡಿಗೆ ಜಾಥಾದ ಹರಿವನ್ನು ಹರಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಜಿಲ್ಲಾಧಿಕಾರಿಗಳು ಕಾರ್ಮಿಕ ಸಂಘಟನೆಗಳು ಮತ್ತು ಕೆಂಪು ಕಲ್ಲು ಕೋರೆಯ ಮಾಲಿಕರ ಜಂಟಿ ಸಭೆಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಫೆಡರೇಶನ್ ಜಿಲ್ಲಾ ಪದಾಧಿಕಾರಿ ರವಿಚಂದ್ರ ಕೊಂಚಾಡಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಫೆಡರೇಶನ್ ಪದಾಧಿಕಾರಿ ವಸಂತಿ ವಂದಿಸಿದರು.
ಪ್ರತಿಭಟನಾ ಪ್ರದರ್ಶನ ನೇತೃತ್ವವನ್ನು ಫೆಡರೇಶನ್ ಮುಂದಾಳುಗಳಾದ ಜನಾರ್ಧನ ಕುತ್ತಾರ್, ರಾಮಚಂದ್ರ ಪಜೀರ್, ರೋಹಿತಾಶ್ವ, ಬಶೀರ್ ಪಜೀರ್, ಬಿಜು ಅಗಸ್ತೀನ್, ವಿಶ್ವನಾಥ ನೆಲ್ಲಿ ಬಂಗಾರಡ್ಕ, ವಸಂತ ಪೇಲ್ತಡ್ಕ, ಆನಂದ ಗೌಡ, ಕೃಷ್ಣಪ್ಪ ಪೂಜಾರಿ, ಜಯಾನಂದ ಮಾರೂರು, ಕೃಷ್ಣಪ್ಪ ನಡಿಗುಡ್ಡೆ, ಶೀನ ಬೆಳುವಾಯಿ, ಸುಧಾಕರ ಹಂಡೇಲು, ಶಾಂತ, ದಿನೇಶ ಇರುವೈಲ್, ರವೀಂದ್ರ ಮುಚ್ಚೂರು, ನೋಣಯ್ಯ ಗೌಡ, ದಿನೇಶ್ ಶೆಟ್ಟಿ ಜಪ್ಪಿನಮೊಗರು, ಹೆರಾಲ್ಡ್, ಅಶೋಕ ಸಾಲ್ಯಾನ್, ದಯಾನಂದ ಕೊಂಚಾಡಿ, ಶಶಿಧರ ಶಕ್ತಿನಗರ, ಅಶೋಕ ಶ್ರೀಯಾನ್ ಮತ್ತಿತರರು ಇದ್ದರು.


