ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹೋದರನಿಗೆ ವಂಚನೆ
Friday, October 24, 2025
ಮಂಗಳೂರು: ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಹೊರದೇಶದಲ್ಲಿದ್ದ ಸಹೋದರನಿಗೆ ತಿಳಿಯದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಾಗದ ಮಾಲಕರಾದ ಜುಬೈರ್ ಅಹಮ್ಮದ್ ಅವರು ತನ್ನ ಸಹೋದರ ಉದ್ಯಮಿ ಅಹ್ಮದ್ ಮೊಯಿದ್ದೀನ್, ಸೀಮಾ, ಅಜಯ್ ಕುಮಾರ್, ಬಿ.ಎಂ. ಮುಮ್ತಾಜ್ ಅಲಿ ಹಾಗೂ ವಕೀಲರಾದ ಜಗನ್ನಾಥ ಪ್ರದೀಪ್ ವಿರುದ್ಧ ಸುರತ್ಕಲ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸಹೋದರ ಸಹಿತ ಇತರ ಆರೋಪಿಗಳು ಸೇರಿಕೊಂಡು 2005ರ ನ. 24ರಂದು ಜಿ.ಪಿ.ಎ. ಕೊಟ್ಟಿರುವ ರೀತಿಯಲ್ಲಿ ನಕಲಿ ದಾಖಲೆ ತಯಾರಿಸಿ 2023ರ ಸೆ. 21ರಂದು ಜಿಲ್ಲಾ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಸ್ಟ್ಯಾಂಪ್ ಕಾಯಿದೆ ಅಡಿಯಲ್ಲಿ ಮುದ್ರಾಂಕ ಶುಲ್ಕ ದೃಢೀಕರಿಸಿ, ನಕಲಿ ಗಿಪ್ಟ್ ಡೀಡ್ (ದಾನಪತ್ರ) ವನ್ನು 2023ರ ಸೆ. 29ರಂದು ಮೂಲ್ಕಿ ಉಪನೋಂದಣಿ ಕಚೇರಿಯಲ್ಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.