ಹನಿಟ್ರ್ಯಾಪ್ ತಂಡಗಳು ಸಕ್ರಿಯ-ಸಂತ್ರಸ್ತರಿಗೆ ಉಚಿತ ಕಾನೂನು ನೆರವು: ನ್ಯಾಯವಾದಿ ಸೌದಾ
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು, ಕೇರಳ ಮೂಲದ ಗಲ್ಫ್ ಉದ್ಯಮಿಯೊಬ್ಬರಿಗೆ ಬಂಟ್ವಾಳದ ಹನಿಟ್ರ್ಯಾಪ್ ತಂಡವೊಂದು ಮೋಸ ಮಾಡಿ 44.80 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣದ ವಿವರ ನೀಡಿದರು.
ಕೇರಳ ನಿವಾಸಿ, 53ರ ಹರೆಯದ ಮುಹಮ್ಮದ್ ಅಶ್ರಫ್ ತಾವರಕಡನ್ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ ಬಶೀರ್ ಕಡಂಬು, ಸಫಿಯಾ ಮತ್ತು ಇತರ ಆರೋಪಿಗಳು ಸೆ.24ಕ್ಕೆ ಮಂಗಳೂರಿಗೆ ಕರೆಸಿ ಹೆಣ್ಣು ತೋರಿಸುವ ನೆಪದಲ್ಲಿ ಫೋಟೋ ವೀಡಿಯೋ ಮಾಡಿಸಿ ಬಳಿಕ ಹಣಕ್ಕಾಗಿ ಬೆದರಿಕೆ ಒಡ್ಡಿದ್ದಾರೆ. ವಿವಾಹಿತ ನಾಗಿರುವ ಅಶ್ರಫ್ ಅವರು ವೀಡಿಯೋ ಬಹಿರಂಗವಾಗುತ್ತದೆ ಎಂಬ ಭಯದಿಂದ ೪೪.೮೦ಲಕ್ಷ ರೂ.ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಕೊನೆಗೆ ಅಶ್ರಫ್ ಅವರ ಪತ್ನಿಗೂ ಬೇರೆಯವರ ಅಶ್ಲೀಲ ವೀಡಿಯೋವೊಂದನ್ನು ಕಳುಹಿಸಿ ಹಣ ನೀಡದಿದ್ದರೆ ನಿಮ್ಮ ಪತಿಯ ಇಂತಹ ವೀಡಿಯೋ ಬಹಿ ರಂಗ ಪಡಿಸುವುದಾಗಿ ಬೆದರಿಸಿದ್ದಾರೆ. ಇದರಿಂದ ಕಳೆದ ವಾರ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿ ಅಶ್ರಫ್‌ರವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಆದರೆ ಒಂದು ವಾರ ಆದರೂ ಆರೋಪಿಗಳ ಬಂಧನವಾಗಿಲ್ಲ. ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಸಾಕಷ್ಟುತೊಂದರೆ ಯಾಗಿತ್ತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮುತುವರ್ಜಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಸಂತ್ರಸ್ತ ಅಶ್ರಫ್‌ರಿಗೆ ನ್ಯಾಯ ದೊರೆಯಬೇಕಿದೆ ಎಂದು ಸೌದಾ ಹೇಳಿದರು.
ಆರೋಪಿ ಸಫಿಯಾ ಎಂಬವರು 2010ರಿಂದಲೂ ಇಂತಹ ಹನಿಟ್ರ್ಯಾಪ್‌ನಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಇಂತಹ ಹಲವು ತಂಡಗಳು ಸಕ್ರಿಯವಾಗಿದ್ದು ತಮ್ಮ ಬಲೆಗೆ ಹಾಕಿಕೊಂಡು ಹಣ ದೋಚುವ ಕಾರ್ಯ ನಡೆಸುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಸೌದಾ ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಕೆಲ ಸಮುದಾಯದ ನಾಯಕರು ಮುಂದೆ ಬಂದು ತಡೆಯಲು ಪ್ರಯತ್ನಿಸಿದ್ದಾರೆ. ಈ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದವರು ಹೇಳಿದರು.
ಗೋಷ್ಠಿಯಲ್ಲಿ ಸಂತ್ರಸ್ತ ಮುಹಮ್ಮದ್ ಅಶ್ರಫ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.