ಹೊಸಬೆಟ್ಟು ಗ್ರಾಮಸಭೆ-ಹಕ್ಕುಪತ್ರ ಸಿಕ್ಕಿದೆ. ನಿವೇಶನ ನೀಡಿಲ್ಲ : ಮನೆಗಾಗಿ 16 ವರುಷಗಳಿಂದ ಮಹಿಳೆಯ ಅಲೆದಾಟ

ಹೊಸಬೆಟ್ಟು ಗ್ರಾಮಸಭೆ-ಹಕ್ಕುಪತ್ರ ಸಿಕ್ಕಿದೆ. ನಿವೇಶನ ನೀಡಿಲ್ಲ : ಮನೆಗಾಗಿ 16 ವರುಷಗಳಿಂದ ಮಹಿಳೆಯ ಅಲೆದಾಟ


ಮೂಡುಬಿದಿರೆ: ಕಳೆದ 16 ವರುಷಗಳಿಂದ ತಾನು ನಿವೇಶನಕ್ಕಾಗಿ ಪಂಚಾಯತ್ ಗೆ ಅಜಿ೯ ನೀಡುತ್ತಾ ಬಂದಿದ್ದೇನೆ. 7 ವಷ೯ಗಳ ಹಿಂದೆ ಹಕ್ಕುಪತ್ರ ಸಿಕ್ಕಿದೆ ಆದರೆ ಇನ್ನೂ ಕೂಡಾ ನಿವೇಶನ  ನೀಡಿಲ್ಲ, ನಾನು ಮಗಳೊಂದಿಗೆ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ, ನನಗೆ ಯಾವಾಗ ನಿವೇಶನ ನೀಡುತ್ತೀರಿ..?ಎಂದು ಮಹಿಳೆಯೊಬ್ಬರು ಹೊಸಬೆಟ್ಟು ಗ್ರಾಮಸಭೆಯಲ್ಲಿ ಪ್ರಶ್ನಿಸಿದ್ದಾರೆ. 


ಪಂಚಾಯತ್ ಅಧ್ಯಕ್ಷೆ ಸೌಮ್ಯ ಸದಾಶಿವ ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಹೋಲಿ ಕ್ರಾಸ್ ಚಚ್೯ ಸಭಾಭವನದಲ್ಲಿ ನಡೆದ ಹೊಸಬೆಟ್ಟು ಗ್ರಾ. ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥೆ ಪ್ರೇಮಾ ಅವರು ನಿವೇಶನ ನೀಡದಿರುವ ಬಗ್ಗೆ ಅಳಲನ್ನು ತೋಡಿಕೊಂಡರು.


ಸಮಸ್ಯೆಗೆ ಸ್ಪಂದಿಸಿ ಮಾತನಾಡಿದ ಸದಸ್ಯ ಚಂದ್ರಹಾಸ ಸನಿಲ್ ಅವರು, ಹಿಂದೆ ನಿವೇಶನಕ್ಕಾಗಿ 5 ಎಕ್ರೆ ಜಾಗ ಮಂಜೂರಾಗಿತ್ತು ಆದರೆ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ತಡೆ ಹಿಡಿಯಲಾಗಿತ್ತು ಆದರೆ ಈಗ ನಿವೇಶನ ನೀಡಲು ಕರಿಂಗಣದಲ್ಲಿ ಜಾಗ ಗುರುತಿಸಲಾಗಿದ್ದು ಅಲ್ಲಿಯೇ ಪಂಚಾಯತ್ ಕಟ್ಟಡವು ನಿಮಾ೯ಣವಾಗಲಿದೆ ಮತ್ತು 65 ಜನರಿಗೆ ಅಲ್ಲಿಯೇ ಸೈಟ್ ನೀಡಲಾಗುವುದು ಅದಕ್ಕಾಗಿ ಜಾಗವನ್ನು ಸಮತಟ್ಟು ಮಾಡಿ ನೀಡಲಾಗುವುದೆಂದು ಭರವಸೆ ನೀಡಿದರು.

ಸದಸ್ಯ ವಿಲ್ಫ್ರೇಡ್ ಮೆಂಡೋನ್ಸ ಮಾತನಾಡಿ, ಮುಂದಿನ ದಿನಗಳಲ್ಲಿ ಪಂಚಾಯತ್ ನಿಂದ ಪ್ರತ್ಯೇಕ ಅನುದಾನವನ್ನಿಟ್ಟು ನಿವೇಶನ, ಅದಕ್ಕೆ ಪೂರಕ ಕೆಲಸವನ್ನು ಮಾಡುತ್ತೇವೆ ಎಂದರು. 

ಗ್ರಾಮಸ್ಥ ಲಿಯೋ ವಾಲ್ಟರ್ ನಜ್ರತ್ ಮಾತನಾಡಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ - ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ  ಲೋಪದೋಷಗಳಾಗುತ್ತಿವೆ ಒಂದೇ ಮನೆಯಲ್ಲಿ ಹತ್ತು ಜನರಿದ್ದರೂ 5 ಜನರದ್ದು ಮಾತ್ರ ಸಮೀಕ್ಷೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇನ್ನು ಎರಡು ದಿನಗಳಲ್ಲಿ ಸಮೀಕ್ಷೆ ಮುಗಿಯುತ್ತದೆ. ಆದರೆ ಗ್ರಾಮದಲ್ಲಿ ಅಪೂರ್ಣ ರೀತಿಯಲ್ಲಿದೆ. ನಮ್ಮ ಮನೆಯಲ್ಲಿರುವ ಸದಸ್ಯರಲ್ಲಿ ಶೇ.50 ಮಂದಿಯ ಸಮೀಕ್ಷೆ ನಡೆದಿಲ್ಲ. ಸರಿಯಾದ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದಿದ್ದರೆ ಯಾಕೆ ಅಂತಹ ಯೋಜನೆ ತರುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಇದಕ್ಕೆ ಉತ್ತರಿಸಿದ ಪಿಡಿಒ ಸವಿತಾ ಕುಮಾರಿ ಎಂ.ಅವರು ಉಳಿದ ಸಮೀಕ್ಷೆಯನ್ನು ಮುಂದುವರಿಸಲು ಪಂಚಾಯತ್ ಕಾರ್ಯಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಬ್ಬರು ಶಿಕ್ಷಕರನ್ನು ಸಂಬಂಧಪಟ್ಟ ಇಲಾಖೆ ನಿಯೋಜಿಸಿದೆ ಎಂದರು. 

ಯಾರಾದರೂ ಮೃತಪಟ್ಟಾಗ ಪೋಸ್ಟ್ ಮಾಟ೯ಂ ಮಾಡಲು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರುವುದಿಲ್ಲ ಇದರಿಂದಾಗಿ ಸಮಸ್ಯೆಯಾಗುತ್ತಿದೆ ಆದ್ದರಿಂದ ಖಾಯಂ ವೈದ್ಯರನ್ನು ಸರ್ಕಾರ ನಿಯೋಜಿಸಲಿ ಎಂದು ಸದಸ್ಯ ರೆಕ್ಸನ್ ಪಿಂಟೋ ಆಗ್ರಹಿಸಿದರು.

ಆರೋಗ್ಯ ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್ ಮಾತನಾಡಿ, ಕುಪ್ಪೆಪದವು, ಕಲ್ಲಮುಂಡ್ಕೂರು, ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಬಂದು ಪೋಸ್ಟ್ ಮಾರ್ಟಂಗೆ ಮಾಡುತ್ತಾರೆ. ಕೆಲವೊಮ್ಮೆ ವಿಳಂಬವಾಗಿರಬಹುದು. ಆದರೆ ಈಗ ಪೋಸ್ಟ್ ಮಾಟ೯ಂ ಇದ್ದರೆ ತುರ್ತಾಗಿ ಅವರಿಗೆ ಮಾಹಿತಿ ನೀಡುತ್ತೇವೆ ಎಂದರು. 

45 ವರ್ಷಗಳಿಗೂ ಹಳೆಯದಾದ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಬಾವಿ, ಕಾಡು ಗುಡ್ಡ ಪ್ರದೇಶಗಳಲ್ಲೂ ತಂತಿಗಳು ಜೋತು ಬಿದ್ದಿವೆ ಎಂದು ಗ್ರಾಮಸ್ಥ ಮೆನೇಜಸ್ ಸಭೆಯಲ್ಲಿ ಪ್ರಸ್ತಾಪಿಸಿದರು. ಕರಿಂಗಣ 5 ಸೆಂಟ್ಸ್  ಪ್ರದೇಶದಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬವೊಂದು ವಾಲಿ ಮರದಲ್ಲಿ ಸಿಲುಕಿಕೊಂಡಿದೆ ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ತೆರವು ಮಾಡಿಲ್ಲ. ಇಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ನೀವೇ ಹೊಣೆ ಎಂದು ಆಶಾ ಕಾಯ೯ಕತೆ೯ ಯಶೋಧ ಅವರು ಅಧಿಕಾರಿಗಳ ಗಮನಕ್ಕೆ ತಂದರು. 

ಮಳೆಗಾಳದಲ್ಲಿ ವಿದ್ಯುತ್ ಖಡಿತವಾಗಿ ಸಮಸ್ಯೆಯಾದಾಗ ಮೆಸ್ಕಾಂಗೆ ಕರೆ ಮಾಡಿ ತಿಳಿಸಿದಾಗ ಮೆಸ್ಕಾಂ ಎಸ್ ಒ ಅವರು ಉಡಾಫೆಯಾಗಿ ಮಾತನಾಡಿದ್ದಾರೆ. ಸಾವ೯ಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಇಂತಹ ಅಧಿಕಾರಿಗಳು ಇಲ್ಲಿಗೆ ಬೇಡ ಅವರನ್ನು ಬದಲಾವಣೆಗೊಳಿಸಿ ಎಂದು ಗ್ರಾಮಸ್ಥ ಸದಾಶಿವ ಪೂಜಾರಿ ಹೇಳಿದರು.

ಹಲವು ಕಡೆ ಹಳೇ ತಂತಿಗಳನ್ನು ಬದಲಾಯಿಸುತ್ತಿದ್ದೇವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮೆಸ್ಕಾಂ ಅಧಿಕಾರಿ ಪ್ರವೀಣ್ ಎಂ. ಭರವಸೆ ನೀಡಿದರು 

ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್ ನೊಡೇಲ್ ಅಧಿಕಾರಿಯಾಗಿದ್ದರು. 

ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಮೀನಾಕ್ಷಿ, ಸಚ್ಚೀಂದ್ರ ಪೂಜಾರಿ, ಹರಿಣಾಕ್ಷಿ, ಪ್ರದೀಪ್ ಪೂಜಾರಿ, ರುಕ್ಯಾ ಇಬ್ರಾಹಿಂ, ಯಶೋಧ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶ್ರೀಧರ್ ಅನಗೌಡರ್ ನಿರೂಪಿಸಿದರು. ಸಿಬ್ಬಂದಿ ಸಂಜೀವ್ ನಾಯ್ಕ್ ಜಮಾ ಖರ್ಚು ವಿವರ ನೀಡಿದರು.


ಸಮೀಕ್ಷೆಯನ್ನು ನಾವು ಬಹಿಷ್ಕರಿಸುತ್ತೇವೆ: 

ಸಮೀಕ್ಷೆ ಸೂಕ್ತ ರೀತಿಯಲ್ಲಿ ನಮ್ಮ ಗ್ರಾಮದಲ್ಲಿ ನಡೆದಿಲ್ಲ. ಪಂಚಾಯತ್ ಗೆ ಬಂದು ದಿನವಿಡೀ ಕುಳಿತುಕೊಳ್ಳಲು ನಮಗೆ ಸಾಧ್ಯವಿಲ್ಲ. ಇಂತಹ ಲೋಪವಿರುವ ಸಮೀಕ್ಷೆಯನ್ನು ನಾವು ಮಾಡಿಸುವುದಿಲ್ಲ ನಾವಿದನ್ನು ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥ ಮನೋಹರ್ ಕುಟಿನ್ಹ ಗ್ರಾಮಸಭೆಯಲ್ಲಿ ತಿಳಿಸಿದ್ದಾರೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article