ಮೂಡುಬಿದಿರೆಯಲ್ಲಿ 2000 ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

ಮೂಡುಬಿದಿರೆಯಲ್ಲಿ 2000 ನೇ ಮದ್ಯವರ್ಜನ ಶಿಬಿರ ಉದ್ಘಾಟನೆ


ಮೂಡುಬಿದಿರೆ: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಿಜಾರು ಪುತ್ತಿಗೆ ವಲಯ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಮೂಡುಬಿದಿರೆ ತಾಲೂಕು, ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಮತ್ತು ಮದ್ಯ ವಿಮುಕ್ತಿ ಚಿಕಿತ್ಸಾ ಕೇಂದ್ರ ಮಿಜಾರು ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 2000ನೇ ಮದ್ಯವರ್ಜನ ಶಿಬಿರವು ಗುರುವಾರ ಮಿಜಾರಿನಲ್ಲಿ ಆರಂಭಗೊಂಡಿತು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮದ್ಯಪಾನ  ಮಾಡುವವರು ಎಂದಿಗೂ ಸುಂದರವಾದ ಮನಸ್ಸನ್ನು ಹೊಂದಿರಲಾರರು, ಈ ಮದ್ಯಪಾನದಿಂದ ಎಷ್ಟೋ ಗಂಡಾಂತರಗಳು ನಡೆದಿವೆ ಮತ್ತು ಅದೆಷ್ಟೋ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಈ ಸತ್ಯ ಅರಿತ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರವನ್ನು ಪ್ರಾರಂಭಿಸಿ  ಮದ್ಯವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಿ ಹಲವು ಕುಟುಂಬಗಳಿಗೆ ಉತ್ತಮ ಜೀವನ ನಡೆಸಲು ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮದ್ಯವರ್ಜನ ಶಿಬಿರ ಇಂದು ಎರಡು ಸಾವಿರನೇ ಮದ್ಯವರ್ಜನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ.

2000 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ  ಡಾ.ವಿನಯ್ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ಕೇವಲ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬುದು ಧರ್ಮವಲ್ಲ, ಶರೀರವು ಒಂದು ಧರ್ಮವೆಂಬುದನ್ನು ನಾವಿಂದು ಮರೆತಿದ್ದೇವೆ. ಧರ್ಮ ಎಂದರೆ ಕರ್ತವ್ಯ ನಿವಾರಣೆ ಹಾಗಾಗಿ ನಮ್ಮ ಶರೀರದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ನಾವು ಆರೋಗ್ಯವಾಗಿರಲು ಸಾಧ್ಯವೆಂದರು.

ಶಿಬಿರಾಧಿಕಾರಿ ನಂದಕುಮಾರ್ ಮದ್ಯವರ್ಜನ ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ‌ ಮಾತನಾಡಿ ಏಕಕಾಲದಲ್ಲಿ 13 ಕಡೆಗಳಲ್ಲಿ ಮದ್ಯವರ್ಜನ ಶಿಬಿರ ಉದ್ಘಾಟನೆಗೊಂಡಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ , ವಕೀಲ, ಎಸ್.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ತೆಂಕಮಿಜಾರು ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅನುವಂಶೀಕ  ಆಡಳಿತ ಮೊಕ್ತೇಸರ ಕುಲದೀಪ ಎಂ ಚೌಟ, ಖ್ಯಾತ ಗಾಯಕಿ ಅಖಿಲಾ ಪಜ್ಜಿಮಣ್ಣು, ಉದ್ಯಮಿ ಶ್ರೀಪತಿ ಭಟ್ ಕೆ., ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ವೈದ್ಯೆ ಆಶಾ ಜ್ಯೋತಿ,  ಶಿಬಿರದ ಆಪ್ತ ಸಮಾಲೋಚಕಿ ಸುಮನಾ ಪಿಂಟೋ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಧನಂಜಯ್ ಸ್ವಾಗತಿಸಿದರು. ರುಕ್ಮಯ ಗೌಡ ಪ್ರಾರ್ಥಿಸಿದರು. ಜ್ಞಾನ ವಿಕಾಸ ಸಮಾನ್ವಯಾಧಿಕಾರಿ ವಿದ್ಯಾ ನಿರೂಪಿಸಿ, ಆಪ್ತ ಸಮಾಲೋಚಕ ಲೋಹಿತ್ ವಂದಿಸಿದರು.

ಶಿಬಿರದಲ್ಲಿ ಒಟ್ಟು 60 ಜನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article