ಮೂಡುಮಾರ್ನಾಡು ಶಾಲೆಯಲ್ಲಿ ಎಕ್ಸಲೆಂಟ್ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಎನ್‌ಎಸ್‌ಎಸ್ ಶಿಬಿರವು ಕುಟುಂಬ ಪ್ರಜ್ಞೆ, ರಾಷ್ಟ್ರೀಯ ಚಿಂತನೆ ಮತ್ತು ಬದುಕಿನಲ್ಲಿ ಎದುರಾಗುವ ಸಂಘರ್ಷಗಳನ್ನು ಎದುರಿಸುವ ಕಲೆಯನ್ನು ತಿಳಿಸಿಕೊಡುತ್ತದೆ ಎಝದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೋಲದಂತೆ ಬದುಕಲುಎನ್ ಎಸ್ ಎಸ್ ಪಾಠವನ್ನು ಹೇಳಿಕೊಡುತ್ತದೆ. ಪರಿಸ್ಥಿತಿಗಳು ವಿರುದ್ಧವಾಗಿದ್ದಾಗ ತಾಳ್ಮೆಯಿಂದಿದ್ದು ಅದನ್ನು ನಿಭಾಯಿಸುವ ಕ್ರಮವನ್ನು ಹಾಗೂ ಸಮಾಜದಲ್ಲಿ ಸಾಮಾನ್ಯ ಜನರ ಬದುಕಿನ ಪರಿಚಯವನ್ನು ಮಾಡಿಕೊಡುತ್ತದೆ ಎಂದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ಮಾತನಾಡಿ, ಇಂದು ಮತ್ತು ಮುಂದುಗಳ ನಡುವಿನ ಕೊಂಡಿಯೇ ವರ್ತಮಾನವೆಂಬ ಕಿಂಡಿ. ಕಾಲ ಮುಂದುವರೆಯುವುದೇ ಆ ಕಿಂಡಿಯ ಮೂಲಕ. ಬದುಕಿನ ಸಂಕೀರ್ಣತೆಗಳು ಮತ್ತು ಸವಾಲುಗಳು ನಮ್ಮನ್ನು ಗಟ್ಟಿ ಮಾಡುತ್ತವೆ. ಕಷ್ಟಗಳ ಮಳೆಯಂತೆ ಸುರಿಯುವಾಗ ಅದನ್ನು ನಗುತ್ತಾ ಸ್ವೀಕರಿಸಲು ಈ ಶಿಬಿರಗಳು ನಮಗೆ ಜೀವನ ಪಾಠವನ್ನು ಒದಗಿಸಿಕೊಡುತ್ತವೆ ಎಂದರು.
ಪಡುಮಾರ್ನಾಡು ಗ್ರಾಪಂ ಅಧ್ಯಕ್ಷ ವಾಸುದೇವ ಭಟ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ಚೌಟ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಂಪಾ, ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಮನೋಜ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಡಿಸೋಜ, ಶಾಲೆಯ ವಿದ್ಯಾರ್ಥಿ ನಾಯಕಿ ಆತ್ಮೀ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ತೇಜಸ್ವೀ ಭಟ್ ಸ್ವಾಗತಿಸಿದರು. ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಕಾಯ೯ಕ್ರಮ ನಿರೂಪಿಸಿದರು.
