ಮೂಡುಬಿದಿರೆ ತಾಲೂಕಿನ ಐವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಅಂತರಾಷ್ಟ್ರೀಯ ಕ್ರೀಡಾಪಟು ಶಿತಾ೯ಡಿ ಮೂಲದ ಜೋಯ್ಲಿನ್ ಮ್ಯೂರಲ್ ಡಿ'ಸೋಜಾ, ತಾಲೂಕು ಪಂಚಾಯತ್ ಮಾಜಿ ಸದಸ್ಯ, ಸಮಾಜ ಸೇವಕರಾದ ರುಕ್ಕಯ್ಯ ಪೂಜಾರಿ, ಪ್ರಗತಿಪರ ಕೃಷಿ ಸಾಧಕರಾದ ಕೆ.ಪಿ. ಸಂತೋಷ್ ಶೆಟ್ಟಿ (ಕಡಂದಲೆ) ಮತ್ತು ದೈವಾರಾಧಕ ಗೋಪಾಲ ಕೋಟ್ಯಾನ್ (ಮಾರೂರು) ಹಾಗೂ ನಾಗಸ್ವರ ವಾದಕ ಅಶ್ವತ್ಥಪುರದ ದಿನೇಶ್ ಕುಮಾರ್ ಅವರು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾದವರು.
ಜೋಯ್ಲಿನ್ ಲೋಬೋ ಅವರು ಕ್ರೀಡಾ ಕ್ಷೇತ್ರದಲ್ಲಿ ತ್ರಿವಿಧ ಜಿಗಿತದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ 5 ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ 20 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಮಟ್ಟದ ದಾಖಲೆಗಳನ್ನು ಹೊಂದುವ ಜೊತೆಗೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಇದರಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಚಿನ್ನದ ಪದಕವೂ ಸೇರಿದೆ.
ರಾಜ್ಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ 6 ಬಾರಿ ಹಾಗೂ ಆಲ್ ಇಂಡಿಯಾ ಪಬ್ಲಿಕ್ ಸೆಕ್ಟರ್ ಸೆಕ್ಟರ್ ಕ್ರೀಡಾ ಕೂಟದಲ್ಲಿ 17 ಬಾರಿ ಭಾರತೀಯ ಜೀವವಿಮಾ ನಿಗಮವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಾಗಿ ಹಲವಾರು ಕ್ರೀಡಾ ದಾಖಲೆಗಳು ಜೋಯ್ಲಿನ್ ಲೋಬೊ ಅವರ ಹೆಸರಿನಲ್ಲಿ ಇವೆ.
ರುಕ್ಕಯ್ಯ ಪೂಜಾರಿ ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ತಾಲ್ಲೂಕು ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ.
ಕಡಂದಲೆಯ ಸಂತೋಷ್ ಶೆಟ್ಟಿ ಅವರು ದೀರ್ಘಕಾಲದಿಂದ ಕೃಷಿ ಚಟುವಟಿಕೆಗಳನ್ನು ನಡೆಸುತ್ತಾ, ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಯಶಸ್ಸು ಸಾಧಿಸಬಹುದೆಂದು ತೋರಿಸಿಕೊಟ್ಟ ಪ್ರಗತಿಪರ ಕೃಷಿ ಸಾಧಕರಾಗಿದ್ದಾರೆ.
ಮಾರೂರಿನವರಾದ ಗೋಪಾಲ ಕೋಟ್ಯಾನ್ ಅವರು ಹಲವು ವರ್ಷಗಳಿಂದ ದೈವಾರಾಧನೆಯಲ್ಲಿ ಸೇವೆ ಸಲ್ಲಿಸುತ್ತಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನಾಗಸ್ವರ ವಾದಕ ಅಶ್ವತ್ಥಪುರದ ದಿನೇಶ್ ಕುಮಾರ್ ಸಾಧನೆಯನ್ನು ಮಾಡಿದ್ದಾರೆ.
ಈ ಐವರು ಸಾಧಕರು ಮೂಡುಬಿದಿರೆಗೆ ಹೆಮ್ಮೆ ತಂದಿದ್ದು, ನವೆಂಬರ್ 1 ರಂದು ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.