ಚಿನ್ನ ಕಳ್ಳತನದೊಂದಿಗೆ ಸಜ್ಜಿಗೆಯನ್ನೂ ತಿಂದ ಕಳ್ಳರು..!
Monday, October 13, 2025
ಪುತ್ತೂರು: ಹಗಲು ಹೊತ್ತಿನಲ್ಲಿಯೇ ಮನೆಯೊಂದಕ್ಕೆ ಕಳ್ಳತನಕ್ಕಾಗಿ ಬಂದ ಕಳ್ಳರು ಸುಮಾರು 3 ಪವನ್ ಚಿನ್ನ ಕಳ್ಳತನ ನಡೆಸಿ ಮನೆಯಲ್ಲಿ ಮಾಡಿಟ್ಟಿದ್ದ ಸಜ್ಜಿಗೆಯನ್ನೂ ತಿಂದು ಹೋದ ಘಟನೆ ಪುತ್ತೂರಿನಲ್ಲಿ ಭಾನುವಾರ ನಡೆದಿದೆ.
ಪುತ್ತೂರಿನ ಹೊರವಲಯದಲ್ಲಿರುವ ನೆಹರೂನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸಿಟಿಗುಡ್ಡೆ ಎಂಬಲ್ಲಿ ಮೋಹನ್ ಆಚಾರ್ಯ ಅವರ ಮನೆಗೆ ಹಿಂಬದಿ ಬಾಗಿಲನ್ನು ಒಡೆದು ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಜತೆಗೆ ಆರಾಮವಾಗಿ ಮಾಡಿಟ್ಟಿದ್ದ ಸಜ್ಜಿಗೆಯನ್ನೂ ತಿಂದಿದ್ದಾರೆ. ಈ ಸಂದರ್ಭ ಮೋಹನ್ ಆಚಾರ್ಯ ಅವರ ಕುಟುಂಬ ಪೊಳಲಿ ದೇವಸ್ಥಾನಕ್ಕೆ ತೆರಳಿತ್ತು. ಸಂಜೆ ಬಂದು ನೋಡಿದಾಗ ಚಿನ್ನ ಕಳ್ಳತನ ಹಾಗೂ ಸಜ್ಜಿಗೆ ತಿಂದ ಪ್ರಕರಣ ಬೆಳಕಿಗೆ ಬಂದಿದೆ. ನಗರ ಪೊಲೀಸರು ಪ್ರಕರಣದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಮಂದಿ ಪೊಳಲಿ ದೇವಸ್ಥಾನಕ್ಕೆ ಹೋಗುವ ಮಾಹಿತಿ ತಿಳಿದವರೇ ಈ ಕೃತ್ಯ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.