ಕೋಮುಧ್ವೇಷ-ಸುಳ್ಳು ಪ್ರಚಾರದ ವಿರುದ್ಧ ಕಠಿಣ ಕಾನೂನು: ಸಿದ್ದರಾಮಯ್ಯ

ಕೋಮುಧ್ವೇಷ-ಸುಳ್ಳು ಪ್ರಚಾರದ ವಿರುದ್ಧ ಕಠಿಣ ಕಾನೂನು: ಸಿದ್ದರಾಮಯ್ಯ


ಪುತ್ತೂರು: ತಲಾ ಆದಾಯದಲ್ಲಿ ಮೊದಲ ಸ್ಥಾನವನ್ನು ಗಳಿಸಿರುವ ಕರ್ನಾಟಕದ ದಕ ಜಿಲ್ಲೆ ಧರ್ಮದ ಹೆಸರಿನ ಕಚ್ಚಾಟದಲ್ಲಿ ನಂಬರ್ ಒಂದಾಗಿತ್ತು. ಈಗ ಅದಕ್ಕೆ ಕಡಿವಾಣ ಹಾಕಲಾಗಿದೆ. ಸಮಾಜದಲ್ಲಿರುವ ಅಸಮಾನತೆ ತಾರತಮ್ಯ ತೊಡೆದುಹಾಕಿ ಸಮಸಮಾಜದ ನಿರ್ಮಾಣವಾಗಬೇಕು. ನಾವು ಸಂವಿಧಾನವನ್ನು ಅರಿತುಕೊಳ್ಳದಿದ್ದರೆ ಸಮಾನತೆಯ ಸಮಾಜದ ನಿರ್ಮಾಣ ಅಸಾಧ್ಯ. ರಾಜ್ಯದಲ್ಲಿ ಕೋಮುಧ್ವೇಷ ಹರಡುವವರ ಹಾಗೂ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಸೋಮವಾರ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ  ಶಾಸಕ ಅಶೋಕ್ ರೈ ಅವರ ರೈ ಎಸ್ಟೇಟ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಅಶೋಕಾ ಜನಮನ ಬಡವರಿಗೆ ದೀಪಾವಳಿ ಕೊಡುಗೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮಲ್ಲಿ ಅನೇಕ ಜಾತಿಧರ್ಮಗಳಿವೆ. ಆದರೆ ಯಾವ ಧರ್ಮವೂ ಧ್ವೇಷವನ್ನು ಪ್ರತಿನಿಧಿಸುವುದಿಲ್ಲ. ದಕ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕೋಮುಸೌಹಾರ್ಧತೆಯನ್ನು ಹಾಳುಮಾಡಲು ಪ್ರಯತ್ನಗಳಾಗುತ್ತಿದೆ. ಇದಕ್ಕೆ ದಕ್ಷ ಅಧಿಕಾರಿಗಳ ಮೂಲಕ ಇತಿಶ್ರೀ ಹಾಕಲಾಗಿದೆ.  ಜಾತಿಯ ಹೆಸರಲ್ಲಿ ಹಾಗೂ ಧರ್ಮದ ಹೆಸರಲ್ಲಿ ಅಮಾಯಕರ ಸಾವಿಗೆ ಕಾರಣವಾಗುವುದು ಅಮಾನವೀಯವಾದ ಕೆಲಸವಾಗಿದೆ. ಈ ಜಗಳ ಸೃಷ್ಟಿಸುವವರ ಮಕ್ಕಳು ಇದರಲ್ಲಿ ಇಲ್ಲ. ಬಡವರ್ಗದ ಜನತೆಯ ಮಕ್ಕಳ ಬದುಕನ್ನು ಹಾಳುಮಾಡುವ ಇಂತಹ ಕ್ರಿಯೆಗಳ ಬಗ್ಗೆ ಜನತೆ ಯೋಚನೆ ಮಾಡಬೇಕಾಗಿದೆ. ಸಮಾಜಮುಖಿ ಚಿಂತನೆಯೊಂದಿಗೆ ನಾವು ಮನುಷ್ಯರಾಗಲು ಪ್ರಯತ್ನಪಡಬೇಕು ಎಂದರು. 

ಮೆಡಿಕಲ್ ಕಾಲೇಜ್ ಬಗ್ಗೆ ಅನುಮಾನವೇ ಬೇಡ

ಗ್ಯಾರಂಟಿಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿರೋಧ ಪಕ್ಷ ಬಿಜೆಪಿ ಅಪಪ್ರಚಾರ ಮಾಡುತ್ತದೆ. ಆದರೆ ಬೇರೆ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಯನ್ನೇ ಕಾಪಿ ಮಾಡುತ್ತದೆ. ಕಳೆದ ಎರಡೂವರೆ ವರ್ಷದಲ್ಲಿ 1 ಲಕ್ಷ ಕೋಟಿ ಹಣವನ್ನು ಗ್ಯಾರಂಟಿಗಾಗಿ ವೆಚ್ಚ ಮಾಡಿದ್ದೇವೆ.  ರಾಜ್ಯ ದಿವಾಳಿಯಾಗಿಲ್ಲ. ಆಗುವುದೂ ಇಲ್ಲ. ರಾಜ್ಯದ 22 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಹಾಗೂ ಸೂಫರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮಾಡುತ್ತಿದ್ದೇವೆ. ದಕ ಜಿಲ್ಲೆಯ ಪುತ್ತೂರಿನಲ್ಲಿಯೂ ಮೆಡಿಕಲ್ ಕಾಲೇಜು ಮಾಡಿಯೇ ಸಿದ್ಧ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಇದು ನಮ್ಮ ಬದ್ಧತೆ. ಮಾತು ಕೊಟ್ಟಂತೆ ನಡೆಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಆರ್‌ಎಸ್‌ಎಸ್ ನಿಷೇಧ ಅಪಪ್ರಚಾರ

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘಟನೆ ಹಾಗೂ ಸಂಘಸಂಸ್ಥೆಗಳ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದ್ದರು. ಅದನ್ನೇ ನಾವೂ ಮಾಡಿದ್ದೇವೆ. ಆದರೆ ಇದಕ್ಕೆ ಆರ್ ಎಸ್ ಎಸ್ ನಿಷೇಧ ಮಾಡಲು ಹೊರಟಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅವರು ಮಾಡಿದರೆ ಸರಿ. ನಾವು ಮಾಡಿದರೆ ತಪ್ಪು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದವರು ಹೇಳಿದರು.

ದೀಪಾವಳಿ ಗಿಪ್ಟ್...ಸಿದ್ಧು ವ್ಯಂಗ್ಯ..

2017ರಲ್ಲಿ ಜಿಎಸ್‌ಟಿಯನ್ನು ತಂದಿರುವುದು ಮೋದಿ. ಕಳೆದ 8 ವರ್ಷಗಳಲ್ಲಿ ಸಾಕಷ್ಟು ತೆರಿಗೆ ಸಂಗ್ರಹ ಮಾಡಿದರು. ಈಗ ಅದನ್ನು ಕಡಿತ ಮಾಡಿ ದೀಪಾವಳಿ ಗಿಪ್ಟ್ ಎಂದು ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.  ಇದರಿಂದ ರಾಜ್ಯಕ್ಕೆ 15 ಸಾವಿರ ಕೋಟಿ ನಷ್ಟವಾಗಿದೆ. ವಾಪಾಸು ಕೊಡಲಿ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article