‘ಮತ’ ಮಾರದ ಜಿಲ್ಲೆಯ ಜನತೆ: ಕಿಶೋರ್ ಕುಮಾರ್ ಬೊಟ್ಯಾಡಿ

‘ಮತ’ ಮಾರದ ಜಿಲ್ಲೆಯ ಜನತೆ: ಕಿಶೋರ್ ಕುಮಾರ್ ಬೊಟ್ಯಾಡಿ


ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ ಜಿಲ್ಲೆಯ ಜನತೆ ಮತವನ್ನು ಮಾರಲಿಲ್ಲ. ಆದರೆ ರಾಜ್ಯದ ಇತರ ಕಡೆಗಳಲ್ಲಿ ಆಮಿಷ ತೋರಿ ಕಾಂಗ್ರೇಸ್ ಅಧಿಕಾರ ಪಡೆಯಿತು. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮತದಾರರು ಜಾಗೃತರಾಗಬೇಕು ಎಂದು ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು. 

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನದ ಹಿನ್ನಲೆಯಲ್ಲಿ  ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಜೈನ ಭವನದಲ್ಲಿ ಮಂಗಳವಾರ ನಡೆದ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಹಾಗಾಗಿ ಜನತೆಯ ಗಮನ ಬೇರೆಡೆ ಹರಿಸಲು ಅನಗತ್ಯ ವಿಚಾರಗಳ ಮೂಲಕ ಪ್ರಯತ್ನ ಪಡುತ್ತಿದೆ ಎಂದು ಹೇಳಿದ ಅವರು ಈಶಾನ್ಯ ಭಾರತದಲ್ಲಿ ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಶೇ.40 ಮತದಾರರು ನುಸುಳುಕೋರರೇ ಆಗಿದ್ದಾರೆ. ಇದನ್ನೆಲ್ಲ ತಡೆದು ನಿಜವಾಗಿಯೂ ಯಾರು ದೇಶದ ಪ್ರಜೆಗಳೋ ಅವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಎಸ್‌ಐಆರ್ ಮಾಡಲು ಚುನಾವಣಾ ಆಯೋಗ ಮುಂದಾಗಿದೆ ಎಂದರು.  

ಆಪರೇಶನ್ ಸಿಂಧೂರ ಮತ್ತು ಸರ್ಜಿಕಲ್ ದಾಳಿಯ ಬಳಿಕ ತಾಯಿ ಭಾರತಿ ವಿಶ್ವಕ್ಕೆ ಶಕ್ತಿಯ ಸ್ವರೂಪಿಣಿಯಾಗಿದ್ದಾಳೆ. ಕಳೆದ 70 ವರ್ಷಗಳ ಅವಧಿಯಲ್ಲಿ ನಮಗೆ ಆತಂಕವಿತ್ತು. ಆದರೆ ಮೋದಿ ನಾಯಕತ್ವದ ಮೂಲಕ ಕಳೆದ 11 ವರ್ಷಗಳಲ್ಲಿ ತಾಯಿ ಭಾರತಿ ವೈಭವದ ದಿಕ್ಕಿನಲ್ಲಿ ಸಾಗುತ್ತಿದ್ದಾಳೆ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲೂ ಸಾಧ್ಯವಿಲ್ಲದ ಸ್ಥಿತಿ ಇತ್ತು ಈಗ ಅಲ್ಲಿ ತ್ರಿವರ್ಣಧ್ವಜ ರಾರಾಜಿಸುತ್ತಿದೆ. ಇದು ದೇಶದ ವೈಭವಕ್ಕೆ ಸಾಕ್ಷಿಯಾಗಿದೆ ಎಂದರು. 

ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪುತ್ತೂರು ಮಂಡಲದ ಪ್ರಭಾರಿ ಸುನಿಲ್ ಆಳ್ವ, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಕಲ್ಲಿಮಾರ್, ಎಸ್‌ಟಿ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ವೇದಿಕೆಯಲ್ಲಿದ್ದರು. 

ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು.  ಹರಿಪ್ರಸಾದ್ ಯಾದವ್ ಮತ್ತು ಯುವರಾಜ್ ಪೆರಿಯತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಜೀವ ಮಠಂದೂರು, ಪ್ರೇಮಾನಂದ ಶೆಟ್ಟಿ ಮತ್ತು ಸುನಿಲ್ ಆಳ್ವ ಅವರು ಎಸ್‌ಐಆರ್ ಬಗ್ಗೆ ಬೂತ್ ಎಜೆಂಟರಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article