ಸಂತ ಫಿಲೋಮಿನಾ ವಿದ್ಯಾರ್ಥಿನಿಯರು ವಿವಿ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಸಾಧನೆ
Sunday, October 5, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ವಿದ್ಯಾರ್ಥಿನಿಯರು ಮಂಗಳೂರಿನ ವಿಶ್ವವಿದ್ಯಾಲಯ ಮಟ್ಟದ (ಸ್ನಾತಕೋತ್ತರ) ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
‘ಸಮಗ್ರ ಸಹಕಾರಿ ಅಭಿವೃದ್ಧಿ ಸಂಶೋಧನೆ, ನವೀನತೆ ಮತ್ತು ಮಾಹಿತಿ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಿದಾಗ ಮಾತ್ರ ಸಾಧ್ಯ’ ಎಂಬ ವಿಷಯದ ಮೇಲೆ ನಡೆದ ಈ ಸ್ಪರ್ಧೆಯನ್ನು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ ಲಿಮಿಟೆಡ್, ಬೆಂಗಳೂರು, ಅವರ ಆಶ್ರಯದಲ್ಲಿ ಸೆ.30 ರಂದು ಆಯೋಜಿಸಲಾಗಿತ್ತು.
ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಶ್ರೀರಕ್ಷ ಕೆ. ಪ್ರಥಮ ಸ್ಥಾನ ಪಡೆದು ನಗದು ಬಹುಮಾನವನ್ನು ಪಡೆದರೆ, ಅದೇ ವಿಭಾಗದ ಶ್ರೀದೇವಿ ಎನ್. ದ್ವಿತೀಯ ಸ್ಥಾನ ಪಡೆದು ನಗದು ಬಹುಮಾನವನ್ನು ಪಡೆದರು.
ವಿದ್ಯಾರ್ಥಿನಿಯರ ಈ ಸಾಧನೆಯನ್ನು ಕಾಲೇಜಿನ ಪ್ರಾಚಾರ್ಯರಾದ ರೆ. ಡಾ. ಆಂಟೊನಿ ಪ್ರಕಾಶ್ ಮೊಂತೇರೋ ಅವರು ಶ್ಲಾಘಿಸಿ, ಅವರ ಭವಿಷ್ಯದ ಶ್ರೇಷ್ಠ ಸಾಧನೆಗೆ ಶುಭ ಹಾರೈಸಿದರು.
ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ಗಣೇಶ್ ಭಟ್ ಕೆ. ಹಾಗೂ ಇತರ ಅಧ್ಯಾಪಕರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.