ಹೊಂಡ ಗುಂಡಿಗಳೇ ತುಂಬಿದ ಆಲೆಟ್ಟಿ-ಬಡ್ಡಡ್ಕ ರಸ್ತೆಯ ಪ್ರಯಾಣ ದೇವರಿಗೇ ಪ್ರೀತಿ...! ಇಂಚು ಇಂಚಿಗೂ ಹೊಂಡಮಯ ಈ ಅಂತಾರಾಜ್ಯ ರಸ್ತೆ..!
ನಾರ್ಕೋಡಿನಿಂದ ಬಡ್ಡಡ್ಕ ತನಕ ಸುಮಾರು ೫ ಕಿ.ಮಿ. ರಸ್ತೆಯ ಸ್ಥಿತಿ ಮಾತ್ರ ಹೇಳತೀರದು.ಸುಳ್ಯ-ಆಲೆಟ್ಟಿ- ಬಡ್ಡಡ್ಕ ಕೂರ್ನಡ್ಕ ರಸ್ತೆ ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ೧೧ ಕಿ.ಮಿ.ರಸ್ತೆಯಲ್ಲಿ ಸುಳ್ಯದಿಂದ ನಾರ್ಕೋಡು ತನಕ ಮಾತ್ರ ಅಭಿವೃದ್ಧಿಯಾಗಿದೆ. ನಾರ್ಕೋಡಿನಿಂದ ಬಡ್ಡಡ್ಕ ತನಕ ಹಾಗೂ ಬಡ್ಡಡ್ಕದಿಂದ ಕೂರ್ನಡ್ಕ ತನಕ ಸುಮಾರು ಎಂಟು ಕಿ.ಮಿ.ರಸ್ತೆ ಅಭಿವೃದ್ಧಿ ಕಂಡಿಲ್ಲ. ಈ ರಸ್ತೆಯ ಪ್ರಯಾಣ ದೇವರಿಗೇ ಪ್ರೀತಿ ಎಂಬಂತಿದೆ.
ಅಗಲ ಕಿರಿದಾದ ರಸ್ತೆಯಲ್ಲಿ ಸಂಪೂರ್ಣ ಹೊಂಡ ಗುಂಡಿಗಳೇ ತುಂಬಿದೆ. ಡಾಮರು ಸಂಪೂರ್ಣ ಎದ್ದು ಹೋಗಿ ಆಳೆತ್ತರದ ಗುಂಡಿಗಳು ನಿರ್ಮಾಣವಾಗಿದೆ. ಬೈಕ್, ಕಾರು, ಜೀಪು, ಬಸ್ ಸೇರಿದಂತೆ ದಿನಾಲು ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಡಾಮರಿನ ಪಳೆಯುಳಿಕೆಗಳು ಮಾತ್ರ ಅಲ್ಲಲ್ಲಿ ಇದೆ.
ಅಭಿವೃದ್ಧಿ ಮರೀಚಿಕೆ:
ಕರ್ನಾಟಕ, ಕೇರಳ ರಾಜ್ಯಗಳ ಬಸ್ ಸೇರಿದಂತೆ ನೂರಾರು ವಾಹನಗಳು ಓಡಾಟ ನಡೆಸುವ ರಸ್ತೆಯಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಈ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ದಶಕದಿಂದ ಬೇಡಿಕೆ ಇದ್ದರೂ ಒಂದೆರಡು ಕಡೆ ಅಲ್ಪ ಸ್ವಲ್ಪ ಕಾಂಕ್ರೀಟೀಕರಣ, ಡಾಮರಿನ ತೇಪೆ ಬಿಟ್ಟರೆ ರಸ್ತೆಯನ್ನು ಸರ್ವ ಋತು ಸಂಪರ್ಕ ರಸ್ತೆಯಾಗಿ ಅಭಿವೃದ್ಧಿಪಡಿಸಿಲ್ಲ. ಶಾಸಕರು, ಸಚಿವರು, ಸಂಸದರು ಸೇರಿ ಎಲ್ಲಾ ಸರಕಾರಗಳಿಗೂ ನಿರಂತರ ಮನವಿ, ಬೇಡಿಕೆ ಸಲ್ಲಿಸಿದರೂ ಈ ರಸ್ತೆ ಅಭಿವೃದ್ಧಿಗೆ ಯಾರೂ ಸ್ಪಂದಿಸಿಲ್ಲ ಎಂಬುದು ಗಡಿನಾಡ ಜನರ ನಿರಾಶೆಯ ಮಾತು.
ಮೂರು ಜಿಲ್ಲೆಗಳ ಸಂಪರ್ಕ ಸೇತು:
ಕೇರಳ- ಕರ್ನಾಟಕ ಸಂಪರ್ಕ ಸೇತು ಎಂಬುದರ ಜೊತೆಗೆ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳನ್ನು ಅತ್ಯಂತ ಸಮೀಪದಲ್ಲಿ ಸಂಪರ್ಕಿಸುತ್ತದೆ ಸುಳ್ಯ-ಪಾಣತ್ತೂರು ರಸ್ತೆ. ಸುಂದರ ರಮಣೀಯ ಪರಿಸರದ ಮೂಲಕ ಹಾದು ಹೋಗುವ ರಸ್ತೆಯ ಪ್ರಯಾಣ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. 2018ರಲ್ಲಿ ಜೋಡುಪಾಲದಲ್ಲಿ ಪ್ರಳಯ ಉಂಟಾಗಿ ಮಾಣಿ-ಮೈಸೂರು ರಸ್ತೆ ಸಂಪರ್ಕ ಕಡಿತಗೊಂಡಾಗ ದಕ್ಷಿಣ ಕನ್ನಡ- ಕೊಡಗು ಸಂಪರ್ಕಕ್ಕೆ ಈ ರಸ್ತೆಯನ್ನು ಪರ್ಯಾಯ ರಸ್ತೆಯಾಗಿ ಬಳಸಲಾಗಿತ್ತು. ಸುಳ್ಯ- ಪಾಣತ್ತೂರು-ಕರಿಕೆ- ಭಾಗಮಂಡಲ ಮೂಲಕ ಮಡಿಕೇರಿಗೆ ಬಸ್ ಪ್ರಯಾಣವನ್ನೂ ಆ ಸಂದರ್ಭದಲ್ಲಿ ನಡೆಸಲಾಗಿತ್ತು.
ಈ ರಸ್ತೆ ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಆ ಸಂದರ್ಭದಲ್ಲಿ ಭಾರೀ ಚರ್ಚೆ ನಡೆದಿತ್ತು. ಬಳಿಕದ ವರ್ಷಗಳಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಕೇರಳದ ಭಾಗ ಬಹುತೇಕ ಅಭಿವೃದ್ಧಿಯಾದರೂ ಕರ್ನಾಟಕದ ಭಾಗದಲ್ಲಿ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಸುಳ್ಯದಿಂದ ಕರಿಕೆ ತನಕ ಹಾಗೂ ಸುಳ್ಯದಿಂದ ಪಾಣತ್ತೂರು ಮೂಲಕ ಕಾಞಂಗಾಡ್ಗೆ ಬಸ್ ಸರ್ವೀಸ್ ಇದೆ. ಸುಳ್ಯದಿಂದ ಕೂರ್ನಡ್ಕ ತನಕ ರಾಜ್ಯ ಸಾರಿಗೆ ಬಸ್ ವ್ಯವಸ್ಥೆ ಇದೆ. ಆದರೆ ಹರಿದು ಹಂಚಿ ಹೋಗಿರುವ ರಸ್ತೆ ಮಾತ್ರ ಬಸ್ ಹಾಗೂ ಇತರ ವಾಹನಗಳ ಪ್ರಯಾಣಕ್ಕೆ ಕಂಠಕವಾಗಿದೆ.