ವರ್ಣ ವೈಭವದ ಸುಳ್ಯ ದಸರಾ ಸಂಪನ್ನ: ಜನಮನಸೂರೆಗೊಂಡ ಅದ್ದೂರಿ ಶೋಭಾಯಾತ್ರೆ
ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ , ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ, ಶ್ರೀ ಶಾರದಾಂಬಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ 54ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ-ಸುಳ್ಯ ದಸರಾದ ಮೆರವಣಿಗೆ ಮನ ಸೆಳೆಯಿತು.
ಶೋಭಾಯಾತ್ರೆಯು ಶ್ರೀ ಶಾರದಾಂಬಾ ಕಲಾ ವೇದಿಕೆಯಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಮೈಮನ ರೋಮಾಂಚನಗೊಳಿಸಿದ ಚಲಿಸುವ ಚಿತ್ತಾಕರ್ಷಕ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಕಿವಿಗಪ್ಪಳಿಸಿದ ನಾಸಿಕ್ ಬ್ಯಾಂಡ್‌ನ ಅಬ್ಬರ, ಕೊಂಬು, ಕಹಳೆ, ವಾಲಗ, ವಿಶೇಷ ಸಿಡಿಮದ್ದು ಹೀಗೆ ಸುಳ್ಯ ನಗರದಲ್ಲಿ ಹಲವು ಗಂಟೆಗಳ ಕಾಲ ನಡೆದ ಶೋಭಾಯಾತ್ರೆ ಅಕ್ಷರಷಃ ನೋಡುಗರ ಕಣ್ಣಿಗೆ ಹಬ್ಬವನ್ನೇ ಸೃಷ್ಠಿಸಿತು.
ಚಲಿಸುವ ಹುಲಿ, ಹುಲಿ ವೇಷಗಳು ವಿವಿಧ ಪುರಾಣ ಕಥೆಗಳನ್ನು ಆಧರಿಸಿ ಪ್ರಸ್ತುತ ಪಡಿಸಿದ ಚಲಿಸುವ ಸ್ತಬ್ಧ ಚಿತ್ರಗಳು, ಯಕ್ಷಗಾನ ವೇಷಗಳು, ವರ್ಣಮಯ ಅಲಂಕಾರದಲ್ಲಿ ಪುರಾಣ ವೇಷಗಳು, ದೇವಿ ಮಹಾತ್ಮೆ, ಗಣೇಶ ಮಹಿಮೆ, ಜಾನಪದ ಕಲಾರೂಪಗಳು, ಹಲವು ದೇವರುಗಳ ಚಲಿಸುವ ಸ್ತಬ್ಧ ಚಿತ್ರಗಳು ಸೇರಿದಂತೆ ಹತ್ತಾರು ಆಕರ್ಷಣೆಗಳು ಮನಸೂರೆಗೊಂಡವು. ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆ ವೀಕ್ಷಿಸಿದರು. ಹತ್ತು ಹಲವು ಆಕರ್ಷಣೆಗಳೊಂದಿಗೆ ಸಾಗಿದ ಶ್ರೀದೇವಿಯ ಅದ್ಧೂರಿ ಶೋಭಾಯಾತ್ರೆಯನ್ನು ಭಕ್ತ ಸಮೂಹ ಭಕ್ತಿ ಭಾವದಿಂದ ಕಣ್ತುಂಬಿ ಕೊಂಡರು. ಸಾವಿರಾರು ಮಂದಿ ಶೋಭಾಯಾತ್ರೆಯ ಜೊತೆ ಹೆಜ್ಜೆಹಾಕಿದರು. ಒಟ್ಟಿನಲ್ಲಿ ಸುಳ್ಯಕ್ಕೆ ಮತ್ತೊಂದು ಜಾತ್ರೆಯ ಸೊಬಗನ್ನು ತಂದಿತ್ತ ನಾಡಹಬ್ಬ ದಸರಾ ಸಂಪನ್ನಗೊಂಡಿತು.
ದೇವಿಯ ವಿಗ್ರಹ ಪಯಸ್ವಿನಿ ನದಿಯಲ್ಲಿ ಜಲಸ್ತಂಭನಗೊಳಿಸುವುದರೊಂದಿಗೆ ದಸರಾ ಸಮಾಪ್ತಿಯಾಯಿತು.
ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ, ಶಾಸಕಿ ಭಾಗೀರಥಿ ಮುರುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಶ್ರೀ ಶಾರದಾಂಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಲೀಲಾಧರ ಡಿ.ವಿ. ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್ ಶ್ರೀ ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್, ಕಾರ್ಯದರ್ಶಿ ಎಂ.ಕೆ. ಸತೀಶ್, ಶ್ರೀ ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ, ದಸರಾ ಉತ್ಸವ ಸಮಿತಿಯ ಕೋಶಾಧಿಕಾರಿ ಸುನಿಲ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲು ಸೇರಿ ಶಾರದಾಂಬ, ದಸರಾ ಸಮೂಹ ಸಮಿತಿಯ ಎಲ್ಲಾ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.
