ಕರಾವಳಿ ಸೇವಾ ಪ್ರತಿಷ್ಠಾನದ ವತಿಯಿಂದ ಐದನೆಯ ವರ್ಷದ ದೀಪಾವಳಿ ಸಂಭ್ರಮ, ತುಳು ಲಿಪಿ ಕಲಿಕೆಗೆ ಅವಕಾಶ
ಸುರತ್ಕಲ್: ಕರಾವಳಿ ಸೇವಾ ಪ್ರತಿಷ್ಠಾನ ಸುರತ್ಕಲ್ ಇದರ ವತಿಯಿಂದ ಶಾಸಕರದ ಡಾ. ಭರತ್ ಶೆಟ್ಟಿ ವೈ ಅವರ ಮುಂದಾಳತ್ವದಲ್ಲಿ ಯುವ ಸಮೂಹವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಐದನೆಯ ವರ್ಷದ ದೀಪಾವಳಿ ಸಂಭ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.19 ಹಾಗೂ ಅ.25 ಮತ್ತು 26ರಂದು ಫುಡ್ ಫೆಸ್ಟ್, ದೀಪಾವಳಿ ನೈಟ್ಸ್ ಸುರತ್ಕಲ್ನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.19 ರಂದು ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ಬೆಳಗ್ಗೆ 8.30ಕ್ಕೆ ಅಂತರ್ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಲಾಗುವುದು. ಮಕ್ಕಳ ಕುಣಿತ ಭಜನೆ ಮುಕ್ತ ವಿಭಾಗ ಹಾಗೂ ಭಜನಾ ಸ್ಪರ್ಧೆ ನಡೆಯಲಿದ್ದು, ನಗದು ಬಹುಮಾನ ಹಾಗೂ ಬಾರಿತೋಷಕ ನೀಡಲಾಗುವುದು. ಇದೇ ದಿನ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆಯ, ಗೋಪೂಜೆ, ಸುಡುಮದ್ದು ಪ್ರದರ್ಶನ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರುಗಳು, ಬಿಜೆಪಿ ಪಕ್ಷದ ಮುಖಂಡರು ಸ್ಥಳೀಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಅ.25 ಮತ್ತು 26 ರಂದು ಸುರತ್ಕಲ್ನಲ್ಲಿ ಕರಾವಳಿಯ ಸಾಂಪ್ರದಾಯಿಕ ಫುಡ್ ಫೆಸ್ಟ್ ಆಯೋಜಿಸಲಾಗಿದೆ. ರವಿವಾರ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಮೈದಾನದಲ್ಲಿ ದೀಪಾವಳಿ ನೈಟ್ಸ್ ನಡೆಯಲಿದ್ದು, ಖ್ಯಾತ ಗಾಯಕ ಹೇಮಂತ್, ಪಾಪ್ ಸಿಂಗರ್ ಜಸ್ಕರಣ್ ಸಿಂಗ್, ತುಳುನಾಡಿನ ಪ್ರತಿಭೆ ವಿದ್ಯಾ ಸುವರ್ಣ, ಅನನ್ಯ ಪ್ರಕಾಶ್ ಮತ್ತಿತರರು ಸಂಗೀತ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರಾವಳಿ ಸೇವಾ ಪ್ರತಿಷ್ಠಾನದ ಪ್ರಮುಖರಾದ ವರುಣ್ ಚೌಟ, ಪುಷ್ಪ ರಾಜ್ ಮುಕ್ಕ, ಸಂಜಿತ್ ಶೆಟ್ಟಿ, ಆಶಿತ್ ನೋಂಡಾ, ಪುಷ್ಪರಾಜ್ ಪುತ್ರನ್ ಉಪಸ್ಥಿತರಿದ್ದರು.