ಆರ್.ಎಸ್.ಎಸ್. ನಿಷೇಧ: ಸಿಎಂ ವಿಮರ್ಶಿಸಿ ನಿರ್ಧಾರ

ಆರ್.ಎಸ್.ಎಸ್. ನಿಷೇಧ: ಸಿಎಂ ವಿಮರ್ಶಿಸಿ ನಿರ್ಧಾರ


ಉಡುಪಿ: ಆರ್‌ಎಸ್‌ಎಸ್ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯವನ್ನು ಸರಕಾರಕ್ಕೆ ಹೇಳಿದ್ದಾರೆ. ಅವರಿಗೆ ಅವರದ್ದೇ ಅಭಿಪ್ರಾಯ ತಿಳಿಸುವ ಹಕ್ಕು ಖಂಡಿತವಾಗಿಯೂ ಇದೆ. ಆದರೆ, ಮುಖ್ಯಮಂತ್ರಿ ಎಲ್ಲರ ಜೊತೆ ವಿಮರ್ಶಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ತನ್ನ ಅಭಿಪ್ರಾಯವನ್ನು ಸರಕಾರದ ಮುಂದಿಟ್ಟಿದ್ದಾರೆ. ಯಾವುದೇ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲು ಗಮನಹರಿಸಬೇಕು. ಸಮಾಜಕ್ಕೆ ಆಗುವ ಲಾಭವನ್ನೂ ಗಮನಿಸ ಬೇಕು. 100 ವರ್ಷ ಪೂರೈಸಿರುವ ಆರ್‌ಎಸ್‌ಎಸ್ ನಿಷೇಧ ಸರಿಯಲ್ಲ. ಸರಕಾರ ಎಲ್ಲ ವಿಷಯದಲ್ಲೂ ಲಾಭ-ನಷ್ಟವನ್ನು ಗಮನಿಸಬೇಕು ಎಂದು ಸಲಹೆ ನೀಡಿದರು.

ಆರ್‌ಎಸ್‌ಎಸ್ ತನ್ನ ಹೆಸರಿನಂತೆಯೇ ರಾಷ್ಟ್ರೀಯ ಸೇವೆ ಮಾಡುತ್ತಿದೆ. ವ್ಯವಸ್ಥೆಯಲ್ಲಿ ಕೆಲವು ತಪ್ಪುಗಳಾಗುವುದು ಸಹಜ. ಆದರೆ, ಆ ತಪ್ಪುಗಳು ಇದೆಯೋ ಇಲ್ಲವೋ ಎಂಬುದನ್ನೂ ವಿಮರ್ಶಿಸಬೇಕು. ಒಬ್ಬರಿಗೆ ಸರಿ ಎಂದು ಕಂಡದ್ದು ಮತ್ತೊಬ್ಬರಿಗೆ ತಪ್ಪು ಎಂದೆನಿಸಬಹುದು. ತಪ್ಪುಗಳಿದ್ದರೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ಆರ್‌ಎಸ್‌ಎಸ್ ಕಳೆದ ನೂರು ವರ್ಷದಿಂದ ಮಾಡುತ್ತಿರುವ ದೇಶ ಸೇವೆಯ ಕಾರ್ಯವನ್ನು ಗಮನಿಸಬೇಕು. ಅದರಿಂದ ದೇಶಕ್ಕೆ ಆಗಿರುವ ಲಾಭವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮಾಡಿರುವ ದೇಶ ಸೇವೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಮುಂದೆಯೂ ಆರ್‌ಎಸ್‌ಎಸ್ ಈ ಸೇವಾ ಕಾರ್ಯವನ್ನು ಮುಂದುವರೆಸುತ್ತದೆ ಎಂದವರು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article