‘ಶ್ರೀ ಪಾಟೀಲ್ ಸೌಕೂರು ಅಂತಯ್ಯ ಶೆಟ್ಟಿ ಮೆಮೋರಿಯಲ್ ಟ್ರೋಫಿ’ ಮಂಗಳೂರು ವಿವಿ ಮಟ್ಟದ ಅಂತರಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ಸಂಪನ್ನ
Friday, October 17, 2025
ಆತಿಥೇಯ ಎಸ್.ಡಿ.ಎಂ. ಕಾಲೇಜು ವಲಯ ಮಟ್ಟದಲ್ಲಿ ಪ್ರಥಮ, ಅಂತರ್‌ವಲಯದಲ್ಲಿ ದ್ವಿತೀಯ
ಉಜಿರೆ: ಉಜಿರೆಯ ಎಸ್.ಡಿ.ಎಂ. ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಜಂಟಿ ಆಶ್ರಯದಲ್ಲಿ ಉಜಿರೆಯ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ 2025-26ನೇ ಸಾಲಿನ ‘ಶ್ರೀ ಪಾಟೀಲ್ ಸೌಕೂರು ಅಂತಯ್ಯ ಶೆಟ್ಟಿ ಮೆಮೋರಿಯಲ್ ಟ್ರೋಫಿ’ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮೂರು ದಿನಗಳ ಅಂತರಕಾಲೇಜು (ಮಂಗಳೂರು ವಲಯ ಮತ್ತು ಅಂತರ್ ವಲಯ) ಪುರುಷರ ವಾಲಿಬಾಲ್ ಪಂದ್ಯಾವಳಿ ಅ.15ರಂದು ಸಮಾಪನಗೊಂಡಿತು.
ಮಂಗಳೂರು ವಲಯ ಮಟ್ಟದ ಪಂದ್ಯಾಟದಲ್ಲಿ ಆತಿಥೇಯ ಉಜಿರೆ ಎಸ್.ಡಿ.ಎಂ. ಕಾಲೇಜು ಪ್ರಥಮ ಸ್ಥಾನ ಗಳಿಸಿದರೆ, ಕುದ್ರೋಳಿ (ಮಂಗಳೂರು) ಶ್ರೀ ನಾರಾಯಣ ಗುರು ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ಮಂಗಳೂರು ಅಂತರ್ ವಲಯ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಗಳಿಸಿದ್ದು, ಉಜಿರೆ ಎಸ್.ಡಿ.ಎಂ. ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ವಿಜೇತರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಕ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿ’ಸೋಜ ಬಹುಮಾನ ವಿತರಿಸಿ, ಶುಭ ಹಾರೈಸಿದರು.
ವಿಶ್ವವಿದ್ಯಾನಿಲಯದ ಪಂದ್ಯಾವಳಿ ವೀಕ್ಷಕ ಸತೀಶ್ ಕುಮಾರ್, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ತರಬೇತುದಾರರು ಉಪಸ್ಥಿತರಿದ್ದರು.




