ಕೈಯ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು: ಡಾ. ಪ್ರಸನ್ನ ಕುಮಾರ ಐತಾಳ್
Wednesday, October 15, 2025
ಉಜಿರೆ: ಕೈಯ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ವಿಶ್ವದಾದ್ಯಂತ ಅನೇಕ ಮಕ್ಕಳು ಕೈಯ ಅಸುರಕ್ಷತೆಯಿಂದಾಗಿ ನ್ಯೂಮೇನಿಯಾ ಡಯೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಇತ್ಯಾದಿಗಳು ಕಾಯಿಲೆಗಳು ಕೆಲವು ವೈರಸ್ ಹಾಗೂ ಬ್ಯಾಕ್ಟೀರಿಯಗಳಿಂದ ಬರುವುದರಿಂದ ಕೈಯ ಸುರಕ್ಷತೆ ಅತಿ ಮುಖ್ಯವಾಗಿದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ವೈಜ್ಞಾನಿಕ ಕ್ರಮದಿಂದ ಕೈಯನ್ನು ತೊಳೆದುಕೊಳ್ಳಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘ, ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಾಂಸ್ಕೃತಿಕ ಸಮಿತಿಯ ವತಿಯಿಂದ ನಡೆದ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ವೈಜ್ಞಾನಿಕವಾಗಿ ಕೈ ತೊಳೆಯುವ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು.
ಆಹಾರ ತಿನ್ನುವ ಮೊದಲು ಹಾಗೂ ಆನಂತರ, ಪ್ರಾಣಿಗಳನ್ನು ಮುಟ್ಟಿದಾಗ, ಶೌಚ ಹಾಗೂ ಮೂತ್ರಾದಿಗಳ ವಿಸರ್ಜನೆಯ ಬಳಿಕ ಅಗತ್ಯವಾಗಿ ಸೋಪು ಉಪಯೋಗಿಸಿ ಕೈ ತೊಳೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಅಭ್ಯಾಗತರಾಗಿ ಆಗಮಿಸಿದ ಸಾಂಸ್ಕೃತಿಕ ಸಮಿತಿಯ ಸಂಯೋಜಕ ಹಾಗೂ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ನಾಗರಾಜ್ ಭಂಡಾರಿ ಅವರು ಮಾತನಾಡಿ, ಕೊರೊನಾದ ಅನಂತರ ಎಲ್ಲರಿಗೂ ಕೈ ಸುರಕ್ಷತೆ ಬಗ್ಗೆ ಹೆಚ್ಚು ಅರಿವಿಗೆ ಬಂದಿತು. ಅನೇಕ ವರ್ಷಗಳಿಂದ ಇಂತಹ ಅರಿವಿನ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಹ ಯೋಜನಾಧಿಕಾರಿ ಶೋಭಾ ಉಪಸ್ಥಿತರಿದ್ದರು.
ಸಂಸ್ಕೃತ ಸಂಘದ ಅಧ್ಯಕ್ಷೆ ಹಂಸಿನೀ ಭಿಡೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಸನ್ನಾ ಸ್ವಾಗತಿಸಿ, ಎನ್‌ಎಸ್‌ಎಸ್ ಸ್ವಯಂ ಸೇವಕಿ ಪ್ರಣಮ್ಯಾ ಜಿ.ಕೆ. ವಂದಿಸಿದರು.
