ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ
Sunday, October 19, 2025
ಉಜಿರೆ: ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಮುಂಭಾಗ ಹರಿಯುವ ನೇತ್ರಾವತಿ ನದಿಯ ಪರಿಸರದಲ್ಲಿ ಭಾನುವಾರ ಮೊಸಳೆ ಕಂಡು ಬಂದಿದೆ.ದೇವಸ್ಥಾನದ ಸಮೀಪ ಮೃತ್ಯುಂಜಯ ಹಾಗೂ ನೇತ್ರಾವತಿ ನದಿ ಸಂಗಮಗೊಳ್ಳುತ್ತದೆ. ಭಾನುವಾರ ಕೆಸರು ಮಿಶ್ರಿತ ನೀರಿನೊಂದಿಗೆ ಉತ್ತಮ ಹರಿವಿದ್ದ ನದಿಯಲ್ಲಿ ಬೆಳಗಿನ 10 ಗಂಟೆ ಸಮಯ ಮೊಸಳೆ ಈಜಾಡುತ್ತಿರುವುದು ದೇವಸ್ಥಾನದಲ್ಲಿ ಇದ್ದವರಿಗೆ ಕಂಡು ಬಂದಿದೆ. ಬಳಿಕ ಮೊಸಳೆ ನದಿಯ ಇನ್ನೊಂದು ಭಾಗದಲ್ಲಿ ಮರಳಿನ ಮೇಲೆ ವಿಶ್ರಮಿಸುತ್ತಿತ್ತು. ಬಳಿಕ ಮತ್ತೆ ನದಿಗೆ ಇಳಿದ ಮೊಸಳೆ ಸ್ವಲ್ಪ ಸಮಯದ ನಂತರ ಅದೇ ಸ್ಥಳದಲ್ಲಿ ಕಂಡುಬಂತು. ಸುಮಾರು ಒಂದು ತಾಸಿನಷ್ಟು ಸಮಯ ಅಲ್ಲೇ ಇದ್ದ ಮೊಸಳೆ ಮತ್ತೆ ನದಿಗೆ ಇಳಿದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊಸಳೆ ಕಂಡುಬಂದ ಸ್ಥಳಕ್ಕೆ ಹೋಗಲು ಹೆಚ್ಚಿನ ನೀರ ಹರಿವು ಹಾಗೂ ಸ್ಥಳದಲ್ಲಿ ಹೂಳು ತುಂಬಿರುವುದು ಅಡ್ಡಿ ಯಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ನೇತ್ರಾವತಿ, ಮೃತ್ಯುಂಜಯ ನದಿ ಪ್ರದೇಶದ ಅಲ್ಲಲ್ಲಿ ಮೊಸಳೆ ಕಂಡು ಬಂದಿರುವ ಕುರಿತು ಸ್ಥಳೀಯರು ಹೇಳುತ್ತಿದ್ದಾರೆ.
ಕಳೆದ 4 ವರ್ಷಗಳ ಹಿಂದೆಯೂ ಈ ಪ್ರದೇಶದಲ್ಲಿ ಮೊಸಳೆ ಕಂಡುಬಂದಿದ್ದು,ಬಳಿಕ ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಸ್ಥಳೀಯರ ಬಾವಿಯಲ್ಲಿ ಪತ್ತೆಯಾಗಿ, ಅರಣ್ಯ ಇಲಾಖೆ ಅದನ್ನು ರಕ್ಷಿಸಿ ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿತ್ತು.
ನೇತ್ರಾವತಿ, ಮೃತ್ಯುಂಜಯ ನದಿ ಪರಿಸರದಲ್ಲಿ ಆಗಾಗ ಮೊಸಳೆ ಕಂಡು ಬರುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ .ನದಿ ಬದಿ ತಿರುಗಾಡುವ ಜನರು ನದಿ ಬದಿಗಳಲ್ಲಿರುವ ಕೃಷಿಕರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.