ಅಂಬ್ಲಮೊಗರು ಗ್ರಾಮದ ಭೂ ಹಗರಣದ ಬಗ್ಗೆ ಸಮಗ್ರ ತನಿಖೆಯಾಗಲಿ: ಸುನಿಲ್ ಕುಮಾರ್ ಬಜಾಲ್

ಅಂಬ್ಲಮೊಗರು ಗ್ರಾಮದ ಭೂ ಹಗರಣದ ಬಗ್ಗೆ ಸಮಗ್ರ ತನಿಖೆಯಾಗಲಿ: ಸುನಿಲ್ ಕುಮಾರ್ ಬಜಾಲ್

ಬಡ ರೈತರ ಕ್ರಷಿಭೂಮಿಯ ಅಕ್ರಮ ಸ್ವಾಧೀನದ ವಿರುದ್ಧ ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು  ಪ್ರತಿಭಟನೆ


ಉಳ್ಳಾಲ: ಬಡ ಗೇಣಿದಾರರ ಭೂಮಿಯನ್ನು ಮಾಲೀಕರಿಂದ ನೇರವಾಗಿ ಖರೀದಿ ಮಾಡಿ ಗೇಣಿದಾರರಿಗಾದ ಅನ್ಯಾಯದ ವಿರುದ್ಧ, ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವುದರ ವಿರುದ್ಧ ಹಾಗೂ ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ ರಸ್ತೆಯ ಅತಿಕ್ರಮಣದ ವಿರುದ್ಧ ಅಂಬ್ಲಮೊಗರು ಗ್ರಾಮದ ನಾಗರೀಕರು ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಇಂದು ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಬ್ಲಮೊಗರು ಮುನ್ನೂರು ಬೆಳ್ಮ ಗ್ರಾಮದ ನಾಗರಿಕರು ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಬೇಜವಾಬ್ದಾರಿ ವರ್ತನೆಯನ್ನು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಂಬ್ಲಮೊಗರು ಗ್ರಾಮವೊಂದರಲ್ಲೇ ನೂರಾರು ಎಕರೆ ಭೂಮಿಯನ್ನು ದಲ್ಲಾಳಿಗಳ ಮೂಲಕ ಖರೀದಿಸಿ ಬಡ ಗೇಣಿದಾರರಿಗೆ ವಿಪರೀತ ಅನ್ಯಾಯವನ್ನು ಎಸಗಲಾಗಿದೆ.ರೈತರ ಕೃಷಿ ಭೂಮಿಯನ್ನು ನುಂಗಿ ಹಾಕಿ ಕೃಷಿರಂಗಕ್ಕೆ ಕೊಡಲಿಪೆಟ್ಟು ನೀಡಲಾಗಿದೆ.ಈ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮುನ್ಸೂಚನೆಯನ್ನು ನೀಡದೆ ಏಕಾಏಕಿಯಾಗಿ ರೈತರ ಭೂಮಿಯನ್ನು ಕೈವಶ ಮಾಡಿರುವುದರ ಹಿಂದೆ ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ಸಂಸ್ಥೆಯ ಕೈವಾಡವಿದೆ. ತಮ್ಮ ಯೋಜನೆ ಎಷ್ಟೇ ಪ್ರಭಾವ ಹೊಂದಿದ್ದರೂ ಸ್ಥಳೀಯ ಜನತೆಯ ಬದುಕನ್ನು ನಾಶ ಮಾಡಿ,ಸರಕಾರಿ ಭೂಮಿಗಳನ್ನು ಒತ್ತುವರಿ ಮಾಡಿ, ಸ್ಥಳೀಯ ಪಂಚಾಯತ್ ನ ನಿರ್ದೇಶನ ಗಳನ್ನು ಉಲ್ಲಂಘನೆ ಮಾಡಿದರೆ ಏನು ಪ್ರಯೋಜನ...? ಈ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಸ್ಥಳೀಯ ಗ್ರಾಮಸ್ಥರಿಗೆ ಮಾತ್ರ ನ್ಯಾಯ ದೊರಕಿಲ್ಲ.ಈ ಬಾರಿ ನಾಗರೀಕರ ಅಹವಾಲನ್ನು ನಿರ್ಲಕ್ಷಿಸಿದರೆ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೋಟುರವರು ಮಾತನಾಡಿ, ಜನತೆಯ ತೆರಿಗೆಯ ದುಡ್ಡುನಿಂದ ನಿರ್ಮಾಣಗೊಂಡ ಅಂಬ್ಲಮೊಗರು ಗ್ರಾಮದ ಪ್ರಮುಖ ರಸ್ತೆಯನ್ನು ಬಂದ್ ಮಾಡಿದ ನಿಟ್ಟೆ ಸಂಸ್ಥೆಯ ಕ್ರಮ ತೀರಾ ಅನಾಗರಿಕವಾದದ್ದು. ಜನತೆಗೆ ಆಮಿಷವೊಡ್ಡಿ ಜನರ ಭೂಮಿಯನ್ನು ನುಂಗಿ ಹಾಕಿ ನಾಟಕೀಯವಾಗಿ ಸಮಾಜ ಸೇವೆ ನಡೆಸುವ ಕೀಳು ಅಭಿರುಚಿಯನ್ನು ನಿಟ್ಟೆ ಸಂಸ್ಥೆ ಪ್ರತಿಪಾದಿಸುತ್ತದೆ. ಪಂಜಂದಾಯ ದೈವದ ಭಂಡಾರ ಹೋಗುವ ರಸ್ತೆಯನ್ನೇ ಬಂದ್ ಮಾಡಿದ ನಿಟ್ಟೆ ಸಂಸ್ಥೆಯ ಕ್ರಮವನ್ನು ಧರ್ಮ ದೇವರುಗಳ ಹೆಸರಿನಲ್ಲಿ ರಾಜಕೀಯ ನಡೆಸುವ ಬಿಜೆಪಿ ಪಕ್ಷ ತುಟಿಪಿಟಿಕ್ಕೆನ್ನದೆ ದಿವ್ಯ ಮೌನ ವಹಿಸಿದೆ ಎಂದು ಹೇಳಿದರು.

ಜಿಲ್ಲೆಯ ರೈತ ನಾಯಕರಾದ ಕೃಷ್ಣಪ್ಪ ಸಾಲ್ಯಾನ್ ರವರು ಮಾತನಾಡಿ, ದೇಶದ ಬೆನ್ನೆಲುಬಾದ ರೈತರ ಹೆಸರಿನಲ್ಲಿ ಸದಾ ರಾಜಕೀಯ ನಡೆಸುವ ಬಿಜೆಪಿ ಕಾಂಗ್ರೆಸ್ಸಿಗರು ಅಂಬ್ಲಮೊಗರು ಗ್ರಾಮದ ರೈತರ ಪ್ರಶ್ನೆಗಳು ಉದ್ಭವಿಸಿದಾಗ ಒಂದೇ ಒಂದು ಶಬ್ದ ಮತನಾಡದೆ ಮೌನಕ್ಕೆ ಶರಣಾಗಿದ್ದಾರೆ.ಇದರಿಂದಾಗಿ ಕಾಂಗ್ರೆಸ್ ಬಿಜೆಪಿ ಉಳ್ಳವರ ಪರವೆಂದು ಸಾಬೀತಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ರೈತ ನಾಯಕರಾದ ಶೇಖರ್ ಕುಂದರ್, ವಿಶ್ವನಾಥ ತೇವುಲ, ಕಾರ್ಮಿಕ ನಾಯಕರಾದ ಜಯಂತ ನಾಯಕ್, ಸುಂದರ ಕುಂಪಲ, ರೋಹಿದಾಸ್, ಜನಾರ್ದನ ಕುತ್ತಾರ್, ಪದ್ಮಾವತಿ ಶೆಟ್ಟಿ, ಪ್ರಮೋದಿನಿ ಕಲ್ಲಾಪು,ವಿಲಾಸಿನಿ, ಜಯರಾಮ ತೇವುಲ, ರಫೀಕ್ ಹರೇಕಳ, ಯುವಜನ ನಾಯಕರಾದ ರಿಜ್ವಾನ್ ಹರೇಕಳ, ರಜಾಕ್ ಮುಡಿಪು, ಮಹಿಳಾ ಮುಖಂಡರಾದ ಮಾಲತಿ ಸುಧೀರ್, ದಲಿತ ನಾಯಕರಾದ ವಿಶ್ವನಾಥ ಮಂಜನಾಡಿ, ಸಾಮಾಜಿಕ ಹೋರಾಟಗಾರರಾದ ಅಬೂಬಕ್ಕರ್ ಜೆಲ್ಲಿ ಮುಂತಾದವರು ಉಪಸ್ಥಿತರಿದ್ದರು.

ಹೋರಾಟದ ನೇತ್ರತ್ವವನ್ನು ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನಾಯಕರಾದ ಇಬ್ರಾಹಿಂ ಅಂಬ್ಲಮೊಗರು, ಸುಂದರ ಪೂಜಾರಿ, ಶಾಲಿನಿ ಪೂಜಾರಿ, ಕಮರುನ್ನೀಸಾ, ಯಶೋಧಾ, ಜಮೀಲಾ, ಉಮೇಶ್, ನಾಗೇಶ್ ಮತ್ತಿತರರು ವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article