ಎಸ್‌ಐಟಿ ಅಧಿಕಾರಿಗಳ ವಿರುದ್ಧವೇ ಬೆಳ್ತಂಗಡಿ ಠಾಣೆಯಲ್ಲಿ ಜಯಂತ್ ಟಿ. ದೂರು
Sunday, November 16, 2025
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ವಿರುದ್ಧವೇ ಬೆಳ್ತಂಗಡಿ ಠಾಣೆಗೆ ಜಯಂತ್ ಟಿ. ಅವರು ದೂರು ನೀಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಎಸ್.ಪಿ. ಸೈಮನ್, ಡಿವೈಎಸ್ಪಿ ಆರ್.ಜಿ. ಮಂಜುನಾಥ, ಇನ್ಸೆಕ್ಟರ್ ಮಂಜುನಾಥ ಗೌಡ, ಸಬ್ ಇನ್‌ಸ್ಪೆಕ್ಟರ್ ಗುಣಪಾಲ್ ವಿರುದ್ಧ ಸೌಜನ್ಯ ಪರ ಹೋರಾಟಗಾರ ಟಿ. ಜಯಂತ್ ದೂರು ನೀಡಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ದೈಹಿಕ ಹಲ್ಲೆ, ಪ್ರಾಣ ಬೆದರಿಕೆ, ಅಪರಾಧಿಕ ಪಿತೂರಿ, ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯ ಹೇರಲಾಗಿದೆ. ಅಲ್ಲದೆ ಕಾನೂನು ಬಾಹಿರ ಕೃತ್ಯಗಳು, ಸರಕಾರಿ ಆದೇಶ ಪಾಲನೆ ಮಾಡದೆ ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಪೊಲೀಸರು ಈ ಬಗ್ಗೆ ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ತನ್ನನ್ನು ವಿಚಾರಣೆಗೆಂದು ಕರೆದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೆದರಿಕೆ ಹಾಕಿರುವುದಾಗಿ ರಾಜ್ಯಪಾಲ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೂ ಜಯಂತ್ ದೂರು ನೀಡಿದ್ದರು.