ಭಾರೀ ಗಾತ್ರದ ಹೆಬ್ಬಾವು ಸೆರೆ
ಹಾವು ಕಂಡು ದಿಗಿಲುಗೊಂಡ ಮನೆಯವರು ತಕ್ಷಣ ಐತಾಳರಿಗೆ ಕರೆ ಮಾಡಿ ಸುದ್ದಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಐತಾಳರು ಹಾವನ್ನು ಹಿಡಿವ ಕಾರ್ಯಾಚರಣೆಗೆ ಮುಂದಾದರು. ಹೆಬ್ಬಾವು ಕೂಡಾ ಭಾರೀ ಚಾಕಚಕ್ಯತೆಯಿಂದ ಅವರ ಬಿಗಿ ಮುಷ್ಠಿಯಿಂದ ನುಣುಚಿಕೊಳ್ಳುವ ಯತ್ನ ಮಾಡುತ್ತಾ, ಚೀಲದೊಳಗೆ ತುಂಬಲು ಅಡ್ಡಿಪಡಿಸುತ್ತಿತ್ತು. ಭಾರೀ ಗಾತ್ರದ ಈ ಹೆಬ್ಬಾವು ಶಕ್ತಿಯುತವಾಗಿದ್ದು, ಈ ಸೆಣಸಾಟದಲ್ಲಿ ಹಲವು ಬಾರಿ ಶ್ರೀಧರ ಐತಾಳರ ಕೈಗೆ ಸುತ್ತಿಕೊಂಡು ಆತಂಕ ಸೃಷ್ಟಿಸಿತು. ಆದರೆ ಪರಿಣತ ಉರಗ ತಜ್ಞರಾದ ಐತಾಳರ ಬಿಗಿ ಪಟ್ಟಿನಿಂದ ಕೊನೆಗೂ ತಪ್ಪಿಸಿಕೊಳ್ಳಲಾಗದೆ ಚೀಲದೊಳಗೆ ಪ್ರವೇಶಿಸಿತು. ತಕ್ಷಣ ಚೀಲದ ಬಾಯಿ ಕಟ್ಟಿ ಹೆಬ್ಬಾವನ್ನು ದೂರದ ಸುರಕ್ಷಿತಾರಣ್ಯದಲ್ಲಿ ಬಿಡಲಾಯಿತು.
ಕೋಣಿಯ ಗ್ಯಾರೇಜ್ ಸಮೀಪದ ಮನೆ ವಠಾರದಲ್ಲಿ ಕೆಲವು ದಿನಗಳ ಹಿಂದಷ್ಟೇ ಐತಾಳರು ಇನ್ನೊಂದು ದೊಡ್ಡ ಹೆಬ್ಬಾವನ್ನು ಹಿಡಿದಿದ್ದರು. ಈ ಹಾವಿನೊಂದಿಗೆ 13 ಮೊಟ್ಟೆಗಳೂ ಸಿಕ್ಕಿದ್ದು, ಎಲ್ಲವನ್ನೂ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಖ್ಯಾತ ಉರಗ ತಜ್ಞ ಕೋಟೇಶ್ವರದ ಶ್ರೀಧರ ಐತಾಳರು ಇದುವರೆಗೂ ಐದು ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಹಿಡಿದಿದ್ದು, ‘ಹಾವು ಐತಾಳ’ರೆಂದೇ ಖ್ಯಾತಿ ಗಳಿಸಿದ್ದಾರೆ. ಇವರು ಹಾವುಗಳನ್ನು ಹಿಡಿದು ಸುರಕ್ಷಿತ ಕಾಡಿಗೆ ಬಿಡುವುದು ಮಾತ್ರವಲ್ಲದೆ, ಗಾಯಗೊಂಡ, ರಸ್ತೆಯ ಕರಗಿದ ಡಾಮಾರಿನಲ್ಲಿ ಸಿಕ್ಕಿಕೊಂಡ ಹಾವುಗಳನ್ನು ತಮ್ಮ ಮನೆಯಲ್ಲಿನ ಪಂಜರದಲ್ಲಿರಿಸಿಕೊಂಡು ಚಿಕಿತ್ಸೆ ನೀಡಿ ಗುಣಪಡಿಸಿ, ನಂತರ ಕಾಡಿಗೆ ಬಿಡುತ್ತಾರೆ. ಘೋರ ವಿಷದ ಕಾಳಿಂಗ ಸರ್ಪಗಳೂ ಸೇರಿದಂತೆ, ವಿಷದ ಮತ್ತು ವಿಷ ರಹಿತ ಎಲ್ಲಾ ಬಗೆಯ ಹಾವುಗಳನ್ನು ಹಿಡಿಯುವುದರಲ್ಲಿ ಐತಾಳರು ಸಿದ್ಧಹಸ್ತರು.
ಅರಣ್ಯ ಇಲಾಖೆಯವರೂ ಆಗಾಗ ಇವರ ಸೇವೆಯನ್ನು ಬಳಸಿಕೊಳ್ಳುತ್ತಾರೆ. ಅಪಘಾತ ಇನ್ನಿತರ ಕಾರಣಗಳಿಂದ ಮೃತಪಟ್ಟ ಹಾವುಗಳಿಗೆ ಶ್ರೀಧರ ಐತಾಳರು ವಿದ್ಯುಕ್ತ ಅಂತ್ಯ ಸಂಸ್ಕಾರಗಳನ್ನೂ ನೆರವೇರಿಸುತ್ತಾರೆ. ಹಾವು ಹಿಡಿಯಲು ಕರೆಸಿದವರು ಕೊಟ್ಟಷ್ಟು ಮೊತ್ತದಲ್ಲೇ ತೃಪ್ತಿ ಹೊಂದುವ ಶ್ರೀಧರ ಐತಾಳರು ಅಪ್ಪಟ ಪರಿಸರ ಪ್ರೇಮಿ. ಉತ್ತಮ ಕಲಾವಿದರೂ ಆಗಿರುವ ಇವರು ನೂರಾರು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಪರಿಣತ ಮಿಮಿಕ್ರಿ ಹಾಗೂ ಸಂಗೀತಗಾರರೂ ಹೌದು. ತಬಲಾ, ಹಾರ್ಮೋನಿಯಂ ಇತ್ಯಾದಿ ಸಂಗೀತೋಪಕರಣಗಳನ್ನೂ ನುಡಿಸಬಲ್ಲರು. ಇವರ ಈ ಬಹುಮುಖ ಪ್ರತಿಭೆ ಮತ್ತು ವಿಷ ಜಂತುಗಳಿಂದ ಸಂಭವನೀಯ ಅಪಾಯ ತಪ್ಪಿಸಿದ ಶ್ರೇಷ್ಠ ಸೇವೆಗಳನ್ನು ಗುರುತಿಸಿದ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.