ಕಳಕೊಂಡ 233 ಫೋನ್ ಮರಳಿ ವಾರಿಸುದಾರರಿಗೆ
ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.15ರಿಂದ ಅ.30ರವರೆಗೆ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳಲ್ಲಿ ಒಟ್ಟು 233 ಫೋನ್ಗಳನ್ನು ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆ ಮಾಡಲಾಗಿದ್ದು, ಈ ಫೋನ್ಗಳನ್ನು ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿಪಿ ಮಿಥುನ್ ಎಚ್.ಎನ್., ಸಾರ್ವಜನಿಕರು ಕಳೆದುಕೊಂಡ ಅಥವಾ ಕಳುವಾದ ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಲು ತಂಡವೊಂದನ್ನು ರಚಿಸಲಾಗಿತ್ತು. ನಿರಂತರವಾಗಿ ಈ ಪ್ರಕರಣಗಳನ್ನು ಬೆನ್ನತ್ತಿ ಫೋನ್ಗಳನ್ನು ಮರಳಿ ಪಡೆಯಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಮೊಬೈಲ್ ಫೋನ್ ಕಳೆದುಕೊಂಡರೆ 2022ರಲ್ಲಿ ಆರಂಭಿಸಲಾದ ಸಂಚಾರ ಸಾಥಿ ಪೋರ್ಟಲ್ನ ಸಿಇಐಆರ್ ಮೊಡ್ಯೂಲ್ ಮೂಲಕ ಬ್ಲಾಕ್ ಮಾಡಬಹುದು. ಇದಕ್ಕಾಗಿ ಮೊಬೈಲ್ ಫೋನ್ನ ಇಎಂಐಇ ಸಂಖ್ಯೆ, ಅಸಲಿ ಇನ್ವಾಯ್ಸ್, ಮೊಬೈಲ್ ಮಾಡೆಲ್, ಮೊಬೈಲ್ ಸಂಖ್ಯೆ ಇವಿಷ್ಟು ದಾಖಲೆಗಳಿದ್ದರೆ ಬ್ಲಾಕ್ ಮಾಡಲು ಅನುಕೂಲ ಆಗಲಿದೆ ಎಂದರು.
ಸಂಚಾರ ಸಾಥಿ ಪೋರ್ಟಲ್ ಮೂಲಕ ಸಂಶಯಾಸ್ಪದ ಕರೆಗಳನ್ನು (ಅಂತಾರಾಷ್ಟ್ರೀಯ ಕರೆ ಸೇರಿ) ರಿಪೋರ್ಟ್ ಮಾಡಬಹುದು, ಮೊಬೈಲ್ ಹ್ಯಾಂಡ್ಸೆಟ್ ಅಸಲಿಯೋ ನಕಲಿಯೋ ತಿಳಿಯಬಹುದು. ತಮ್ಮ ಆಧಾರ್ ನಂಬರ್ನಿಂದ ಎಷ್ಟು ಸಿಮ್ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದನ್ನು ಪರಿಶೀಲಿಸಿ, ಅನಧಿಕೃತ ಸಿಮ್ ಇದ್ದರೆ ಅದನ್ನು ನಿಷ್ಕ್ರಿಯಗೊಳಿಸುವುದು ಇತ್ಯಾದಿ ಕೆಲಸಗಳನ್ನು ನಿರ್ವಹಿಸಬಹುದು. ಅಲ್ಲದೆ ಕಾಲಕಾಲಕ್ಕೆ ಸೈಬರ್ ಅಪರಾಧಗಳ ಬಗ್ಗೆ ಅರಿವು ಪಡೆದುಕೊಳ್ಳಬಹುದು. ಸಾರ್ವಜನಿಕರು ಈ ಅವಕಾಶ ಸದ್ಬಳಕೆ ಮಾಡಬೇಕು ಎಂದು ಮಿಥುನ್ ಎಚ್.ಎನ್. ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಪಿ ರವಿಶಂಕರ್, ಹಿರಿಯ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಯಾವ ಠಾಣೆಯಲ್ಲಿ ಎಷ್ಟು....
ಮಂಗಳೂರು ಉತ್ತರ ಠಾಣೆ-9, ಮಂಗಳೂರು ದಕ್ಷಿಣ-16, ಉರ್ವ ಠಾಣೆ-20, ಬರ್ಕೆ-20, ಮಂಗಳೂರು ಪೂರ್ವ ಠಾಣೆ-18, ಉಳ್ಳಾಲ-17, ಕೊಣಾಜೆ-10, ಮಂಗಳೂರು ಗ್ರಾಮಾಂತರ-7, ಕಂಕನಾಡಿ-20, ಪಣಂಬೂರು-23, ಸುರತ್ಕಲ್-14, ಮೂಲ್ಕಿ-11, ಮೂಡುಬಿದಿರೆ-14, ಕಾವೂರು-14, ಬಜ್ಪೆ ಠಾಣೆ-9, ಸೆನ್ ಠಾಣೆ-12 ಫೋನ್ಗಳನ್ನು ಪತ್ತೆ ಮಾಡಲಾಗಿದೆ.