ಯಕ್ಷಗಾನ ಕಲಾವಿದರಿಗೆ ಅಪಮಾನ: ಬಿಳಿಮಲೆ ವಜಾಕ್ಕೆ ಆಗ್ರಹ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಬಿಳಿಮಲೆಯವರ ಯಕ್ಷಗಾನ ಕಲಾವಿದರ ಕುರಿತ ಹೇಳಿಕೆಯನ್ನು ಖಂಡಿಸಿ ಮಾತನಾಡಿದ ಅವರು, ಇದೊಂದು ಸರ್ಕಾರ ಪ್ರಾಯೋಜಿತ ಹೇಳಿಕೆ. ಸರ್ಕಾರ ಬಿಳಿಮಲೆಯಯಂತವರನ್ನು ತನ್ನ ಕೈಗೊಂಬೆಗಳನ್ನಾಗಿಸಿ ಅವರ ಮೂಲಕ ನಮ್ಮ ಸಂಸ್ಕೃತಿ, ಸಾಂಸ್ಕೃತಿಕತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ. ಕರಾವಳಿಯಲ್ಲಿ ದೇವಸ್ಥಾನಗಳೇ ನಡೆಸಿಕೊಂಡು ಬರುತ್ತಿರುವ ಅನೇಕ ಯಕ್ಷಗಾನ ಮೇಳಗಳಿವೆ. ಯಕ್ಷಗಾನ ನಮ್ಮ ಆರಾಧನೆಯ ಒಂದು ಭಾಗವೇ ಆಗಿಹೋಗಿದೆ. ದೇವಸ್ಥಾನದ ಮೇಳಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಸಾರುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿವೆ. ದೇವಸ್ಥಾನ ಮತ್ತು ಯಕ್ಷಗಾನ ನಡುವಿನ ಬೆಸುಗೆಯಾಗಿ ಯಕ್ಷಕಲಾವಿದರೂ ಕಾರ್ಯನಿರ್ವಹಿಸುತ್ತಿದ್ದಾರೆ. ದೇವರ ಪ್ರಸಾದ ಸ್ವೀಕರಿಸಿದ ಬಳಿಕವಷ್ಟೇ ಗೆಜ್ಜೆ ಕಟ್ಟುತ್ತಾರೆ. ರಂಗಸ್ಥಳದಲ್ಲಿ ದೇವಿ ಪಾತ್ರ ಬಂತೆಂದರೆ ಕೈ ಮುಗಿದು ನಿಲ್ಲುವವರಿದ್ದಾರೆ. ಅಂತಹ ಮಹಾನ್ ಕಲೆಗೆ ಕಲಾವಿದರ ಹೆಸರಿನಲ್ಲಿ ಬಿಳಿಮಲೆಯವರು ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಎಲ್ಲಿದ್ದಾರೆ?
ಕರಾವಳಿಯ ಕಲಾವಿದರಿಗೆ ಘೋರ ಅಪಮಾನವಾದರೂ ಕಾಂಗ್ರೆಸ್ ನಾಯಕರು ಮಾತ್ರ ಸೊಲ್ಲೆತ್ತುತ್ತಿಲ್ಲ. ಯಕ್ಷಗಾನ ಆಡಿಸುವ ಅನೇಕ ಕಾಂಗ್ರೆಸ್ ನಾಯಕರು ಕರಾವಳಿಯಲ್ಲಿದ್ದಾರೆ. ಯಕ್ಷಗಾನ ಕಲಾವಿದರಿಗೆ ಅಪಮಾನವಾಗುತ್ತಿರುವಾಗ ಅವರೆಲ್ಲರೂ ಮೌನವಾಗಿರುವುದರ ಒಳಮರ್ಮವೇನು? ಎಂದು ಪ್ರಶ್ನಿಸಿದರು.
ಕೇಸು ದಾಖಲಿಸಲಿ..
ಬಿಳಿಮಲೆಯವರ ವಿರುದ್ಧ ಸರ್ಕಾರ ಸುಮೊಟೋ ಕೇಸು ದಾಖಲಿಸಬೇಕು. ಸಣ್ಣ ಸಣ್ಣ ವಿಷಯಗಳಿಗೆ ಸುಮೋಟೋ ಕೇಸು ದಾಖಲಿಸುವ ಪೊಲೀಸರು ಈ ಹೇಳಿಕೆಯನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಪ್ರಕಾರ ಯಾವ ರೀತಿ ಹೋರಾಟ ಮಾಡಬೇಕು ಅದನ್ನು ನಾವು ಮಾಡುತ್ತೇವೆ.
ಜಿಲ್ಲಾ ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ಬಿಳೆಮಲೆಯವರ ಹೇಳಿಕೆಯಿಂದ ಸಮಸ್ತ ಯಕ್ಷಗಾನ ಕಲಾವಿದರಿಗೆ ತೀವ್ರ ನೋವಾಗಿದ್ದು, ಬಿಳಿಮಲೆಯವರು ತಕ್ಷಣ ಬೇಷರತ್ ಕ್ಷಮೆ ಯಾಚಿಸಬೇಕು. ಯಕ್ಷಗಾನ ಕಲೆಗೆ ಮಾಡಿದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ ಶೇಟ್, ಯಕ್ಷಗಾನ ಕಲಾವಿದ ರವಿ ಅಲೆವೂರಾಯ ಉಪಸ್ಥಿತರಿದ್ದರು.