ಮಂಗಳೂರು: ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ಮೀನಾ ಮೇಷ ಎಣಿಸುವ ರಾಜ್ಯ ಸರಕಾರದ ವಿರುದ್ಧ ಬೀಡಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಇಂದಿನಿಂದ ನಗರದ ಕ್ಲಾಕ್ ಟವರ್ ಬಳಿಯಲ್ಲಿ ರಾತ್ರಿ ಹಗಲು ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು. ಪ್ರಾರಂಭದಲ್ಲಿ ಧರಣಿನಿರತರು ಬೀಡಿ ಮಾಲಕರು ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿದ ಬೀಡಿ ಫೆಡರೇಶನ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ನಿರಂತರ ಶೋಷಿಸುತ್ತಿರುವ ಬೀಡಿ ಮಾಲಕರ ವಿರುದ್ಧ ಕ್ರಮಕೈಗೊಂಡು ಬಾಕಿ ವೇತನವನ್ನು ಕೊಡಿಸಬೇಕು ಹಾಗೂ ಕಾನೂನುಬದ್ದ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕೆಂದು ಹೇಳಿದರು.
ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಮಾತನಾಡಿ, ದುಡಿದ ವೇತನ ನೀಡದ ಮಾಲಕರ ಪರ, ಅತ್ಯಾಚಾರ, ಕೊಲೆ ಮಾಡುವ ಆರೋಪಿಗಳ ಪರ ಸರಕಾರ ರಕ್ಷಣೆಗೆ ನಿಂತು, ಜನರಿಗೆ ನ್ಯಾಯ ಕೊಡಿಸಲಾಗದ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯವನ್ನು ಬಯಲುಗೊಳಿಸಲು ಸಾಧ್ಯವಾಗಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೀಡಿ ಫೆಡರೇಶನ್‌ನ ಜಿಲ್ಲಾಧ್ಯಕ್ಷ ಸುಕುಮಾರ್ ತೊಕ್ಕೋಟು ಅವರು, ಬಾಕಿಯಿರಿಸಿದ ವೇತನವನ್ನು ಪಡೆಯಲು ಕಳೆದ 7 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಬೀಡಿ ಕಾರ್ಮಿಕರ ಸಂಕಷ್ಟವನ್ನು ಎಳೆಎಳೆಯಾಗಿ ವಿವರಿಸುತ್ತಾ, ಸರಕಾರ ಮತ್ತು ಬೀಡಿ ಮಾಲಕರು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀಕ್ಣಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ಬೀಡಿ ಕಾರ್ಮಿಕರ ಅಹವಾಲನ್ನು ಸ್ವೀಕರಿಸಿ ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಹೋರಾಟವನ್ನು ಬೆಂಬಲಿಸಿ ಸಮುದಾಯ ಸಾಂಸ್ಕೃತಿಕ ಸಂಘಟನೆಯ ರಾಜ್ಯ ನಾಯಕ ವಾಸುದೇವ ಉಚ್ಚಿಲ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಬೀಡಿ ಕಾರ್ಮಿಕರ ಸಂಘಟನೆಯ ಮುಖಂಡರಾದ ಜಯಂತಿ ಶೆಟ್ಟಿ ಮತ್ತಿತರರು ಮಾತನಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಖಜಾಂಚಿಯಾದ ಯೋಗೀಶ್ ಜಪ್ಪಿನಮೊಗರು, ಬೀಡಿ ಕಾರ್ಮಿಕರ ಸಂಘಟನೆಯ ಮುಖಂಡರಾದ ಜಯಂತ ನಾಯಕ್, ಪ್ರಮೋದಿನಿ, ವಿಲಾಸಿನಿ, ಸುಂದರ ಕುಂಪಲ, ಬಾಬು ದೇವಾಡಿಗ, ಬಾಬು ಪಿಲಾರ್, ಈಶ್ವರೀ ಬೆಳ್ತಂಗಡಿ, ಜಯಶ್ರೀ, ಪುಷ್ಪಾ, ಭಾರತಿ ಬೋಳಾರ, ವಸಂತಿ ಕುಪ್ಪೆಪದವು, ಕಟ್ಟಡ ಕಾರ್ಮಿಕರ ಸಂಘಟನೆಯ ಜನಾರ್ಧನ ಕುತ್ತಾರ್, ರವಿಚಂದ್ರ ಕೊಂಚಾಡಿ, ರೈತ ಸಂಘಟನೆಯ ಕೃಷ್ಣಪ್ಪ ಸಾಲ್ಯಾನ್, ಶೇಖರ್ ಕುಂದರ್, ಸದಾಶಿವದಾಸ್, ಯುವಜನ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಅಭಿಷೇಕ್ ಬೆಳ್ತಂಗಡಿ, ಜಯಲಕ್ಷ್ಮಿ, ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.