‘ವಿದ್ಯಾರ್ಥಿ ನಿಲಯ, ಗ್ರಂಥಾಲಯಗಳಲ್ಲಿ ಸಂವಿಧಾನ ಕೃತಿ ಲಭ್ಯವಾಗಬೇಕು’: ಯು.ಟಿ.ಖಾದರ್
ಉರ್ವಾಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಸಂವಿಧಾನ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಯಾರು ಇತಿಹಾ ತಿಳಿಯುತ್ತಾರೆಯೋ ಅವರಿಂದ ಇತಿಹಾಸ ನಿರ್ಮಾಣ ಸಾಧ್ಯವಾಗುತ್ತದೆ. ಇತಿಹಾಸ ನಿರ್ಮಾಮದ ವ್ಯಕ್ತಿತ್ವ ಬರಬೇಕಾದರೆ ಇತಿಹಾಸವನ್ನು ಕಲಿತುಕೊಳ್ಳುವುದು ಅಗತ್ಯ. ದೇಶದ ರೈತರು, ಬಡವರು, ಕಾರ್ಮಿಕರು, ಮಹಿಳೆಯರು, ನಿರ್ಗತಿಕರು, ವಿದ್ಯಾರ್ಥಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಿರ್ಭೀತಿಯಿಂದ ಓಡಾಡಲು ಕಾರಣ ಸಂವಿಧಾನ ನಮಗೆ ನೀಡಿರುವ ಹಕ್ಕುಗಳು. ಆ ಹಕ್ಕುಗಳನ್ನು ಅರಿತುಕೊಂಡು ಸಮಾಜ ಹಾಗೂ ದೇಶದ ಒಳಿತಿಗೆ ಪೂರಕವಾಗಿ ಅವುಗಳನ್ನು ಬಳಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಸಂವಿಧಾನವನ್ನು ಅರಿತುಕೊಳ್ಳುವುದು ಬಹು ಮುಖ್ಯ ಎಂದವರು ಹೇಳಿದರು.
ದೇಶದಲ್ಲಿ ಯಾವುದೇ ಸರಕಾರ ಆಡಳಿತದಲ್ಲಿದ್ದರೂ ಸಂವಿಧಾನದ ತತ್ವಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಿದಾಗ ದೇಶ ಬಲಿಷ್ಟವಾಗುತ್ತದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ಜತೆಗೆ ಮಹಾತ್ಮ ಗಾಂಧಿ ಹಾಗೂ ಬಿ.ಆರ್. ಅಂಬೇಡ್ಕರ್ ಓದಿದರೆ ವಿದ್ಯಾರ್ಥಿಗಳು ಭವಿಷ್ಯದ ಸತ್ಪ್ರಜೆಗಳಾಗಲು ಸಾಧ್ಯ. ಇಂದು ಅತ್ಯಧಿಕ ಶಿಕ್ಷಣ ಪಡೆದವರೇ ಭ್ರಷ್ಟಾಚಾರ, ಉಗ್ರ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ ಈ ಮಹಾತ್ಮರ ಜತೆಗೆ ಸಂವಿಧಾನದ ಪುಸ್ತಕಗಳನ್ನು ಓದಲು ಅವಕಾಶ ನೀಡದಿರುವುದು ಎಂದವರು ಹೇಳಿದರು.
ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ನಾವು ಬಾಯಿಗೆ ಬಂದಂತೆ ಮಾತನಾಡುದಲ್ಲ. ಇಂತಹ ಅಸಂಬಂಧ ಮಾತುಗಳಿಂದಲೇ ಇಂದು ಸಮಸ್ಯೆಗಳು ಸೃಷ್ಟಿಯಾಗಿ ಅವುಗಳನ್ನು ಬಗೆಹರಿಸುವುದರಲ್ಲಿಯೇ ಕಾಲಹರಣವಾಗುತ್ತಿದೆ. ನಾವು ಆಡುವ ಹಾಗೂ ಮಾಡುವ ಪ್ರತಿಯೊಂದು ಮಾತು ಹಾಗೂ ಕಾರ್ಯಗಳು ದೇಶದ ಹಿತರಕ್ಕೆ ಪೂರಕವಾಗಿದ್ದರೆ ದೇಶ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿರಲಿದೆ. ಆ ಜವಾಬ್ಧಾರಿಯುತ ಕೆಲಸವನ್ನು ನಾವು ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗೂ ಅಧಿಕಾರಿ ವರ್ಗಕ್ಕೆ ಕಿವಿಮಾತು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ಅಂಗವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಭಾಷಣ, ಚಿತ್ರಕಲೆ ಹಾಗೂ ಫೋಟೋಗ್ರಫಿ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯತ್ ಆವರಣದಿಂದ ಡಾ. ಅಂಬೇಡ್ಕರ್ ಭವನದವರೆಗೆ ‘ಸಂವಿಧಾನ ಜಾಥಾ’ ನಡೆಯಿತು. ಭಾರತ ಮಾತೆ, ಕೈಯ್ಯಲ್ಲಿ ಸಂವಿಧಾನ ಹಿಡಿದ ಅಂಬೇಡ್ಕರ್, ಮಹಾತ್ಮಗಾಂಧಿ ಸಹಿತ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳೊಂದಿಗೆ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ವಿನಾಯಕ ನರ್ವಾಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಗೋಕರ್ಣನಾಥ ಕಾಲೇಜು ಪ್ರಾಂಶುಪಾಲ ರಘುರಾಜ್ ಕದ್ರಿ ಉಪಸ್ಥಿತರಿದ್ದರು.
ಆರಂಭದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ಹೇಮಲತಾ ಸ್ವಾಗತಿಸಿದರು.