ಸಹಕಾರಿ ಕ್ಷೇತ್ರದಿಂದ ಮಾತ್ರ ಸ್ವಾವಲಂಬಿ, ಬಲಿಷ್ಠ ಬದುಕು ಸಾಧ್ಯ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ’ ಪರಿಕಲ್ಪನೆಯಡಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಆತ್ಮ ಗ್ರಾಮೀಣ ಮಟ್ಟದಲ್ಲಿದೆ. ಹಿಂದಿನಿಂದಲೂ ಎಲ್ಲರೂ ಕೈಜೋಡಿಸುವ ಮೂಲಕ ಸಹಕಾರಿ ಶಕ್ತಿಯನ್ನು ಇನ್ನಷ್ಟು ಬಲಗೊಳಿಸಿದ್ದಾರೆ. ಎಲ್ಲ ಸಹಕಾರಿಗಳೂ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಇದಕ್ಕೆ ಕರಾವಳಿ ಕೂಡ ಹೊರತಾಗಿಲ್ಲ ಎಂದರು.
ಹಿಂದೆ ಹೆಂಚು, ಬೀಡಿ ಉದ್ಯಮದಲ್ಲಿ ದುಡಿದು ಸಾಕಷ್ಟು ಮಹಿಳೆಯರು ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಕುಟುಂಬ ಪೋಷಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡ ಮಹಿಳೆಯರ ಹೆಸರಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ರಾಜಕೀಯದಲ್ಲಿ ಮುಂದೆ ಬರುವಂತೆ ಮಹಿಳೆಯರು ಪ್ರೋತ್ಸಾಹ ನೀಡಬೇಕು. ಜವುಳಿ ಉದ್ದಿಮೆ ಸಹಿತ ಮಹಿಳೆಯರು ನಡೆಸುವ ಸ್ವಸಹಾಯ ಉತ್ಪನ್ನಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಒದಗಲಿ ಎಂದು ಅವರು ಹಾರೈಸಿದರು.
ಸಹಕಾರಿ ಕ್ಷೇತ್ರದಲ್ಲೂ ಮಹಿಳಾ ಮೀಸಲಾತಿ ಇರಲಿ:
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲೂ ಮಹಿಳೆಯರಿಗೆ ಶೇ.50ರ ಮೀಸಲಾತಿ ಸಿಗುವಂತಾಗಬೇಕು. ಆಗ ಮಾತ್ರ ಸಹಕಾರಿ ಕ್ಷೇತ್ರದ ಇನ್ನಷ್ಟು ಬೆಳೆವಣಿಗೆಗೆ ಸಾಧ್ಯವಿದೆ ಎಂದರು.
ರಾಜ್ಯ ಸರ್ಕಾರ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ. ಸಾಲದ ಗುರಿ ಹೊಂದಿದ್ದು, ಈಗಾಗಲೇ 16 ಲಕ್ಷ ರೈತರಿಗೆ 15 ಸಾವಿರ ಕೋಟಿ ರೂ. ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗಿದೆ. ಈ ಬಾರಿ 148 ಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯ ಗುರಿ ಹೊಂದಲಾಗಿದ್ದು, 2 ಲಕ್ಷ ಹೆಕ್ಟೇರ್ ಬಿತ್ತನೆ ಕೈಗೊಳ್ಳಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಪಕ್ಷಗಳು ಮಹಿಳಾ ಅಭ್ಯುದಯದ ಯೋಜನೆಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬರುತ್ತಿವೆ. ಅಷ್ಟರ ಮಟ್ಟಿಗೆ ಮಹಿಳೆಯರು ಪ್ರಭಾವಶಾಲಿಗಳಾಗಿದ್ದಾರೆ ಎಂದರು.
ಕಂಪ್ಯೂಟರೀಕರಣಕ್ಕೆ ಒತ್ತು:
ಬೆಂಗಳೂರಿನ ನಬಾರ್ಡ್ ಮುಖ್ಯ ಮಹಾಪ್ರಬಂಧಕ ಡಾ.ಸುರೇಂದ್ರ ಬಾಬು ಮಾತನಾಡಿ, ಸಂಯುಕ್ತ ರಾಷ್ಟ್ರ ಸಂಸ್ಥೆ ಪ್ರಸುತ್ತ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷವಾಗಿ ಆಚರಿಸಲು ಕಾರ್ಯಕ್ರಮ ರೂಪಿಸಿದೆ. ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಭಾಗದ ಜನರನ್ನು ಸದೃಢಗೊಳಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.
ನಮ್ಮ ದೇಶದಲ್ಲಿ 34 ರಾಜ್ಯ ಮಟ್ಟದ ಸಹಕಾರಿ ಬ್ಯಾಂಕ್‌ಗಳಿವೆ. ದೇಶದಲ್ಲಿ 351 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿವೆ. ಇವುಗಳ ಪೈಕಿ ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್ ಅಗ್ರ ಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ಎಲ್ಲ ಭಾಗಗಳಲ್ಲಿ ಸಹಕಾರಿ ಬ್ಯಾಂಕ್‌ಗಳನ್ನು ನಾನು ನೋಡಿದ್ದೇನೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಡಾ.ರಾಜೇಂದ್ರ ಕುಮಾರ್ ನಡೆಸುತ್ತಿರುವ ರೀತಿ ಶ್ಲಾಘನೀಯ. ಸಹಕಾರ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಕುಮಾರ್ ಅಚ್ಚಳಿಯದ ಸಾಧನೆ ಮಾಡಿದ್ದಾರೆ ಎಂದರು.
ನಬಾರ್ಡ್ ಸಹಕಾರಿ ಬ್ಯಾಂಕ್‌ಗಳಿಗೆ ಸಹಕಾರ ನೀಡುತ್ತಿದೆ. ಸಹಕಾರಿ ಕ್ಷೇತ್ರವನ್ನು ಕಂಪ್ಯೂಟರಿಕರಣಗೊಳಿಸುವ ಯೋಜನೆಗೆ ನಬಾರ್ಡ್ ಮುಂದಾಗಿದೆ. ದೇಶದಲ್ಲಿ 8 ಲಕ್ಷ ಸಹಕಾರಿ ಸಮಿತಿಗಳಿದ್ದು, ಈ ಪೈಕಿ 1 ಲಕ್ಷ ಸಹಕಾರಿ ಸಮಿತಿಗಳು ಕೃಷಿ ಸಾಲ ನೀಡುತ್ತಿವೆ. ಈ ಎಲ್ಲ ಸಮಿತಿಗಳನ್ನು ಕಂಪ್ಯೂಟರ್ ಮೂಲಕ ಜೋಡಿಸುವ ಪ್ರಯತ್ನ ನಡೆಯುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದರು.
ಪ್ರತಿ ಮನೆಗಳಲ್ಲಿ ಸಹಕಾರ ತತ್ವ:
ಉತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇ ಗೌಡ, ಕರಾವಳಿಯಲ್ಲಿ ಪ್ರತಿ ಮನೆ ಮನೆಗಳಲ್ಲಿ ಸಹಕಾರ ತತ್ವ ಸಾಕಾರಗೊಂಡಿದೆ. ಸಹಕಾರ ಸಂಘಗಳು ಬೆಳೆ ಸಾಲ ಮಾತ್ರವಲ್ಲ ಬೀದಿ ವ್ಯಾಪಾರ, ಶಿಕ್ಷಣ ಸೇರಿದಂತೆ ವಿವಿಧ ರಂಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ.ಇದರಿಂದಾಗಿಯೇ ಭಾರತದ ದೇಶದ ಆರ್ಥಿಕಾಭಿವೃದ್ಧಿಯ ಹಿಂದೆ ಸಹಕಾರ ಕ್ಷೇತ್ರದ ಶ್ರಮ ಅಡಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮೆನೇಜಿಂಗ್ ಟ್ರಸ್ಟಿ ಆದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸಿದಾಗ ರೈತರ ಕೈಹಿಡಿದಿದ್ದು ಸಹಕಾರಿ ಸಂಘಗಳು. ಸಹಕಾರಿ ಬ್ಯಾಂಕ್‌ಗಳು ಅರ್ಧ ದಿನದಲ್ಲಿ ಸಾಲ ಮಂಜೂರುಗೊಳಿಸುವ ಮೂಲಕ ಗ್ರಾಹಕರಿಗೆ ನೆರವಾಗುತ್ತವೆ. ಮುಂದಿನ ಬಾರಿಯಾದರೂ ಮಂಗಳೂರು ಮತ್ತು ಉಡುಪಿಯವರು ಸಚಿವರಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಎಂದರು.
ಶಾಸಕರಾದ ವೇದವ್ಯಾಸ್ ಕಾಮತ್, ಯಶ್‌ಪಾಲ್ ಸುವರ್ಣ, ಐವನ್ ಡಿಸೋಜಾ, ಕಿಶೋರ್ ಕುಮಾರ್ ಪುತ್ತೂರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ, ರಾಜ್ಯ ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ.ಕುಮಾರ್, ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಉಪನಿಬಂಧಕ ರಮೇಶ್, ಉಡುಪಿ ಜಿಲ್ಲಾ ಉಪ ನಿಬಂಧಕ ಲಾವಣ್ಯ ಕೆ.ಆರ್., ಬ್ಯಾಂಕಿನ ನಿರ್ದೇಶಕ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀ ನ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜ್, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿತರರು ಇದ್ದರು.
ಸಮಾರಂಭಕ್ಕೆ ಮುನ್ನ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಕರಾವಳಿ ಉತ್ಸವ ಮೈದಾನ ವರೆಗೆ ಆಕರ್ಷಕ ಸಹಕಾರ ಮೆರಣಿಗೆ ಏರ್ಪಟ್ಟಿತು.
ನಂದಿನಿ ಉತ್ಪನ್ನ ಬಿಡುಗಡೆ, ಸಾಧಕರಿಗೆ ಸನ್ಮಾನ:
ಈ ಸಂದರ್ಭ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ತಯಾರಿಸಿದ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಸುಮಾರು 1.60 ಕೋಟಿ ರೂ.ಗಳ ಶಿಕ್ಷಣ ನಿಧಿಯನ್ನು ಹಸ್ತಾಂತರಿಸಲಾಯಿತು. ನವೋದಯ ಸ್ವಸಹಾಯ ಸಂಘದ ರಜತೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಸಂತೃಪ್ತಿಯನ್ನು ಅನಾವರಣಗೊಳಿಸಲಾಯಿತು. ಸಹಕಾರ ಹೆಸರಿನಲ್ಲಿ ಸಹಕಾರಿ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಬಾರಿ ಬಜಪೆ, ಕೋಟ ಹಾಗೂ ಬಡಗಬೆಟ್ಟು ಸಹಕಾರಿ ಬ್ಯಾಂಕ್‌ಗಳಿಗೆ ಸಹಕಾರಿ ಮಾಣಿಕ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪುರಸ್ಕೃತ 10 ಮಂದಿಯನ್ನು ಗೌರವಿಸಲಾಯಿತು. ಉತ್ತಮ ಸಹಕಾರಿ ಸಂಘಗಳನ್ನು ಗೌರವಿಸಲಾಯಿತು.