ರಥಬೀದಿ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
Saturday, November 1, 2025
ಮಂಗಳೂರು: ಇಲ್ಲಿನ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ಭಾಷೆ ನಮ್ಮನ್ನು ಬೆಸೆಯುವಂತಿರಬೇಕೇ ಹೊರತು ವಿಭಜಿಸುವಂತಿರಬಾರದು. ಕನ್ನಡ ಭಾಷೆ ನಮಗೆ ಅನ್ನ ನೀಡುವ ಭಾಷೆ ಅದನ್ನು ನಾವು ಗೌರವಿಸಬೇಕು ಎಂದ ಅವರು ಕನ್ನಡವನ್ನು ಸಂವಹನ ಭಾಷೆಯನ್ನಾಗಿ ಬಳಸಿಕೊಂಡಾಗ ಕನ್ನಡಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿದರು.
ನಮಗೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಕನ್ನಡ ಮಾತನಾಡುವ ಜನರು ಹಂಚಿಹೋಗಿದ್ದು, ಕನ್ನಡ ಮಾತನಾಡುವ ಜನರನ್ನು ಒಟ್ಟು ಸೇರಿಸಿಕೊಂಡು 1956ರಲ್ಲಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. ಇದರ ಸವಿನೆನಪಿಗಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದ ಅವರು ಮನೆಯಲ್ಲಿ ನಾವು ನಮ್ಮ ಮಾತೃಭಾಷೆಯನ್ನು ಮಾತನಾಡಿದರೂ ಹೊರಗೆ ಕನ್ನಡವನ್ನು ಮಾತನಾಡಿ ಭಾಷೆಯನ್ನು ಬೆಳೆಸಬೇಕು. ಕನ್ನಡ ಭಾಷೆಯ ಮೇಲಿನ ಪ್ರೀತಿ ಈ ದಿನಕ್ಕೆ ಮಾತ್ರ ಸೀಮಿತವಾಗದೇ, ಎಲ್ಲಾ ದಿನಕ್ಕೂ ಮುಂದುವರೆಯಬೇಕು ಎಂದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ವಿನೋದ ಕನ್ನಡ ರಾಜ್ಯೋತ್ಸವದ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ಸಾಂಸ್ಕೃತಿಕ ವಿಭಾಗದ ಪ್ರೊ. ಕೃಷ್ಣಪ್ರಭ, ವಿಜ್ಞಾನ ವಿಭಾಗಗಳ ಮುಖ್ಯಸ್ಥೆ ಪ್ರೊ. ವಸಂತಿ ಪಿ., ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಮ್ಮಿಕ ಸ್ವಾಗತಿಸಿದರು. ಶ್ರೇಯಸ್ ಕಾರ್ಯಕ್ರಮ ನಿರೂಪಿಸಿ, ಶ್ರೇಯಾ ವಂದಿಸಿದರು.




