ಕಾಡಾನೆ ಹಾಗೂ ವನ್ಯ ಮೃಗಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ಮಂಡೆಕೋಲಿನಲ್ಲಿ ಪ್ರತಿಭಟನೆ
ಹಲವಾರು ಮಂದಿ ಕೃಷಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಕಳೆದ 15 ವರ್ಷಗಳಿಂದ ಕಾಡಾನೆ ಹಾಗೂ ಇತರ ವನ್ಯ ಮೃಗಗಳ ಹಾವಳಿಯಿಂದ ಮಂಡೆಕೋಲು ಗ್ರಾಮದ ಕೃಷಿಕರು ತತ್ತರಿಸಿ ಹೋಗಿದ್ದಾರೆ. ಆದುದರಿಂದ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆನೆ ಹಾವಳಿ ತಡೆಯಲು ಗ್ರಾಮದ ಅರಣ್ಯದಂಚಿನಲ್ಲಿ ಸರಕಾರದ ವತಿಯಿಂದ ಸೋಲಾರ್ ಬೇಲಿ ನಿರ್ಮಿಸಬೇಕು, ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಪಡೆ ರಚಿಸಬೇಕು, ಮಂಗಗಳ ಹಾವಳಿ ತಡೆಗೆ ಮಂಕಿ ಪಾರ್ಕ್ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳ ಶಾಸಕಿ ಭಾಗೀರಥಿ ಮುರುಳ್ಯ ಆಗಮಿಸಿ ಮನವಿ ಸ್ವೀಕರಿಸಿ, ಮಾತನಾಡಿದರ ಅವರು, ಕಾಡಾನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲು ಈಗಾಗಲೇ ಸರಕಾರವನ್ನು ಒತ್ತಾಯಿಸಲಾಗಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ಶೇ.100 ಸಹಾಯಧನ ನೀಡಬೇಕು ಸೇರಿ ವಿವಿಧ ಬೇಡಿಕೆಗಳನ್ಬು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ.ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು. ಸೋಲಾರ್ ಬೇಲಿ, ಮಂಕಿ ಪಾರ್ಕ್ ನಿರ್ಮಾಣ ಕುರಿತು ವರದಿ ಸಿದ್ಧಪಡಿಸಿ ಕೊಡುವಂತೆ ಶಾಸಕರು ಅರಣ್ಯಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನಾಕಾರರು ಮುಂದಿರಿಸಿದ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ದ.ಕ. ಜಿಲ್ಲೆಗೆ ಆನೆ ಕಾರ್ಯಪಡೆ ರಚಿಸಲು ಅನುಮತಿ ಲಭಿಸಿದ್ದು, ಸುಳ್ಯ ಕೇಂದ್ರವಾಗಿ ಕಾರ್ಯಾಚರಿಸಲಿದೆ. ಇದರಿಂದ ಆನೆ ಹಾವಳಿ ತಡೆಯಲು ಪರಿಣಾಮಕಾರಿ ಕ್ರಮಕೈಗೊಳ್ಳಲು ಸಾಧ್ಯ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದರು.
ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಪ್ರಮುಖರಾದ ಹರೀಶ್ ಕಂಜಿಪಿಲಿ, ಗಣೇಶ್ ಮಾವಂಜಿ, ಶಂಕರ ಪೆರಾಜೆ, ಲಕ್ಷ್ಮಣ ಉಗ್ರಾಣಿಮನೆ, ಕೃಷ್ಣಪ್ರಸಾದ್ ಭಟ್, ಚಂದ್ರಜಿತ್ ಮಾವಂಜಿ, ಶುಭಕರ ಬೊಳುಗಲ್ಲು, ಜನಾರ್ಧನ ಬರೆಮೇಲು, ಡಿ.ವಿ.ಸುರೇಶ್, ಕೆಪಿ.ಜಗದೀಶ್ ಸಂಪಾಜೆ, ವೀಣಾ ದೇವರಗುಂಡ, ನಾಗೇಶ್ ದೇವಗುಂಡ, ಜಲಜಾ ದೇವರಗುಂಡ, ಕೇಶವಮೂರ್ತಿ ಹೆಬ್ಬಾರ್, ಆಶಿಕ್ ದೇವರಗುಂಡ ಮತ್ತಿತರರು ಇದ್ದರು. ಪ್ರತಿಭಟನಾ ಸಭೆಗೆ ಮುನ್ನ ಬೃಹತ್ ಮೆರವಣಿಗೆ ನಡೆಯಿತು.
