ನಕಲಿ ಚಿನ್ನ ಅಡವಿಟ್ಟು ವಂಚನೆ: ಆರು ಮಂದಿ ಸೆರೆ
ಉಳ್ಳಾಲ: ತೊಕ್ಕೊಟ್ಟಿನ ಫೈನಾನ್ಸ್ ಒಂದರಲ್ಲಿ 916 ಹಾಲ್ ಮಾರ್ಕ್ ಇರುವ ಅಸಲಿ ಚಿನ್ನವನ್ನೇ ಹೋಲುವ ನಕಲಿ ಆಭರಣಗಳನ್ನ ಅಡವಿರಿಸಿ ಲಕ್ಷಾಂತರ ರೂಪಾಯಿ ವಂಚನೆಗೈದಿರುವ ಖತರ್ನಾಕ್ ಗ್ಯಾಂಗ್ ನ ಆರು ಮಂದಿ ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ.
ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್ ಮತ್ತು ಮಿಸ್ಬಾ, ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್, ಮಂಚಿಲದ ಝಹೀಮ್ ಅಹ್ಮದ್ ರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು, ಹೆಜಮಾಡಿಯ ನೌಫಾಲ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ತೊಕ್ಕೊಟ್ಟು ಕೇಂದ್ರ ಭಾಗದ ಕೊಣಾಜೆ ವಿವಿ ರಸ್ತೆಯ ದ್ವಾರಕ ಕಾಂಪ್ಲೆಕ್ಸ್ ನಲ್ಲಿ, ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ ಮೆಂಟ್ ಕಚೇರಿ ಹೊಂದಿದ್ದು ಕಳೆದ 25 ವರುಷಗಳಿಂದಲೂ ಫೈನಾನ್ಸ್ ವ್ಯವಹಾರ ನಡೆಸುತ್ತಿರುವ ದಿನೇಶ್ ರೈ ಕಳ್ಳಿಗೆ ಎಂಬವರು ಮೋಸ ಹೋಗಿದ್ದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ನ.22ರ ಶನಿವಾರ ಸಂಜೆ ಸುಮಾರು 5 ಗಂಟೆಗೆ ದಿನೇಶ್ ರೈ ಅವರ ಫೈನಾನ್ಸ್ ಗೆ ಬಂದಿದ್ದ ಹೆಜಮಾಡಿ ನಿವಾಸಿ ನೌಫಾಲ್ ಮತ್ತು ಉಳ್ಳಾಲ ಮಂಚಿಲದ ನಿವಾಸಿ ಝಹೀಮ್ ಅಹ್ಮದ್ ಎಂಬವರು 41 ಗ್ರಾಂ ತೂಗುವ ಎರಡು ಚೈನ್ ಗಳನ್ನ ನೀಡಿ ಸಾಲ ಕೊಡುವಂತೆ ಹೇಳಿದ್ದಾರೆ.
ಫೈನಾನ್ಸ್ ಕಚೇರಿಯಲ್ಲಿದ್ದ ಮಾಲಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಎಂಬವರು ಪರಿಶೀಲಿಸಿದಾಗ ಚೈನ್ ಗಳ ಕೊಂಡಿಯಲ್ಲಿದ್ದ ಚಿನ್ನದ ಪರಿಶುದ್ಧತೆಯ 916 ಸಂಕೇತ ಇರುವುದನ್ನು ನೋಡಿದ್ದು ಉಜ್ಜುವ ಕಲ್ಲಿನಲ್ಲಿ ಚೆಕ್ ಮಾಡಿದಾಗ ಚಿನ್ನ ಎಂದು ಕಂಡುಬಂದಿತ್ತು. ಫೈನಾನ್ಸ್ ಮಾಲಕರು ಝಹೀಮ್ ಅಹ್ಮದ್ ಹೆಸರಿನಲ್ಲಿ ಆಭರಣಗಳನ್ನು ಅಡವು ಇಟ್ಟು 3 ಲಕ್ಷದ 55 ಸಾವಿರ ಹಣವನ್ನು ಸಾಲ ನೀಡಿದ್ದಾರೆ.