ಮುಂಬರುವ ಚುನಾವಣೆಗಳ ಗೆಲುವಿನ ಸೂಚನೆ: ಸತೀಶ್ ಕುಂಪಲ
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಇಲ್ಲಿಯ ತನಕ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಜಪೆಯಲ್ಲಿ ಜನರ ಬಿಜೆಪಿಯತ್ತ ಒಲವು ತೋರಿಸಿದ್ದಾರೆ. ಅದರಲ್ಲಿಯೂ ಕ್ರಿಶ್ವಿಯನ್ ಸಮುದಾಯದವರು ಪ್ರತೀಕ್ ಪೂಜಾರಿ ಎಂಬುವವರನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರದ ಕಡೆಗಣನೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ ಎಂದರು.
ಈ ಹಿಂದೆ ಒಂದು ಬಾರಿ ಕಾಂಗ್ರೆಸ್‌ನ ಒಳಗಿನ ಬಿನ್ನಾಭಿಪ್ರಾಯದಿಂದ ಒಮ್ಮೆ ಮಾತ್ರ ಗೆಲುವು ಸಾಧಿಸಿದ್ದ ಬಿಜೆಪಿ, ಈ ಭಾರಿ ಸ್ಥಳೀಯ ಶಾಸಕರ ಅಭಿವೃದ್ಧಿ ಕಾರ್ಯಗಳು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತೆಗೆದುಕೊಂಡ ನಿರ್ಣಯ ಇಂದಿನ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಂದರೆಯಾಗುತ್ತಿದ್ದು, ಮರಳು, ಕೆಂಪು ಕಲ್ಲು ಸಮಸ್ಯೆ ಒಂದೆಡೆಯಾದರೆ, ರಸ್ತೆಯಲ್ಲಿನ ಗುಂಡಿಗಳು ಮತ್ತೊಂದೆಡೆ ಅಭಿವೃದ್ಧಿಯತ್ತ ಗಮನ ಹರಿಸದಿರುವ ಸರ್ಕಾರದ ವೈಫಲ್ಯವನ್ನು ತೋರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗಮನ ಹರಿಸದೇ ಜನರು ಬೇಸತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ನಿಂತಿದ್ದಾರೆ ಎಂದು ದೂರಿದರು.
ಕಿನ್ನಿಗೋಳಿ-ಬಜಪೆ ಚುನಾವಣೆಯ ಫಲಿತಾಂಶ ಮುಂಬರುವ ಚುನಾವಣೆಗಳಿಗೆ ಪೂರಕವಾಗಿದೆ. ರಾಜ್ಯ ಸರ್ಕಾರ ಕೇವಲ ತಾನು-ತಾನು, ತನ್ನ ಕುರ್ಚಿ ಎಂದು ಕಿತ್ತಾಡುತ್ತಿದೆ. ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರದಿಂದ 2 ತಿಂಗಳ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. 2 ತಿಂಗಳ 5 ಸಾವಿರ ಕೋಟಿ ಹಣದ ಲೆಕ್ಕವನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ. ಇನ್ನು ಬಿಜೆಪಿಯವರು ಮುಂದೆ ನಿಂತು ಗೃಹಲಕ್ಷ್ಮೀ ಹಣವನ್ನು ಕೊಡಿಸಬೇಕಾಗಬಹುದು ಎಂದರು.
ಮತ್ತೊಂದೆಡೆ ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಮಾಡಿ ನಿವೃತ್ತರಾಗುತ್ತಿರುವವರಿಗೆ ಕೊಡಬೇಕಾದದ್ದನ್ನು ಕೊಡಲು ಆಗುತ್ತಿಲ್ಲ. ಗ್ಯಾರಾಂಟಿ ಯೋಜನೆಯ ಮೂಲಕ ಜನರಿಗೆ ಮೋಸ ಮಾಡಿ, ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಮುಖರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಸುನೀಲ್ ಆಳ್ವ, ಶಾಂತಿಪ್ರಕಾಶ್ ಹೆಗ್ಡೆ, ಅರುಣ್ ಶೇಟ್, ಹರಿಪ್ರಸಾದ್, ಅಭಿಲಾಶ್, ವಿಜಯ್ ಕುಮಾರ್, ವಸಂತ್ ಪೂಜಾರಿ ಉಪಸ್ಥಿತರಿದ್ದರು.
ಯುವತಿ-ಮಗುವಿನೊಂದಿಗೆ ನಾವಿದ್ದೇವೆ:
ಪುತ್ತೂರಿನ ಹಿಂದು ಯುವತಿಗೆ ಕೃಷ್ಣ ಜೆ. ರಾವ್ ಎಂಬ ಯುವಕ ಮಗು ಭಾಗ್ಯವನ್ನು ಕರುಣಿಸಿ ಸಿದ್ದಿಯಾಗಿದ್ದ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಕ್ಕೆ ಉತ್ತರಿಸಿದ ಕುಂಪಲ ಅವರು ಯುವಕನ ತಂದೆ ಜಗನ್‌ನಿವಾಸ್ ರಾವ್ ಅವರನ್ನು ಪಕ್ಷದ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ. ಉಚ್ಛಾಟನೆಗೂ ಮೊದಲು ನೋಟೀಸು ನೀಡಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಮದುವೆ ಮಾಡಿಸುವುದಾಗಿ ತಿಳಿಸಿದ್ದ ಅವರು ಅದನ್ನು ಒಪ್ಪದಿದ್ದಾಗ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದರೂ ಈಗಲೂ ನಾವು ಯುವತಿ-ಮಗುವಿನೊಂದಿಗೆ ನಾವು ಇದ್ದೇವೆ. ಎಲ್ಲಾ ರೀತಿಯಲ್ಲಿಯೂ ನ್ಯಾಯ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.