ದಲಿತರ ಕುಂದುಕೊರತೆ ದೂರುಗಳಿಗೆ ಡಿಸಿಆರ್‌ಇ ಸರಿಯಾದ ಸ್ಪಂದನ ನೀಡುತ್ತಿಲ್ಲ

ದಲಿತರ ಕುಂದುಕೊರತೆ ದೂರುಗಳಿಗೆ ಡಿಸಿಆರ್‌ಇ ಸರಿಯಾದ ಸ್ಪಂದನ ನೀಡುತ್ತಿಲ್ಲ


ಮಂಗಳೂರು: ದಲಿತರ ಕುಂದುಕೊರತೆ ದೂರುಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್‌ಇ) ಸರಿಯಾದ ಸ್ಪಂದನ ನೀಡುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಹಾಗೂ ಪಂಗಡದ (ಎಸ್‌ಸಿ ಎಸ್‌ಟಿ) ಕುಂದುಕೊರತೆ ಸಭೆಯಲ್ಲಿ ವ್ಯಾಪಕ ದೂರು ವ್ಯಕ್ತವಾಯಿತು.


ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಡಿಸಿಪಿ ಮಿಥುನ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ಈ ವಿಚಾರ  ಪ್ರಸ್ತಾಪಿಸಿದರು. 


ಹಿಂದಿನ ಸಭೆಯ ಪಾಲನಾ ವರದಿ ಮಂಡನೆ ವೇಳೆ ಮಾತನಾಡಿದ ದಲಿತ ಮುಖಂಡ ಆನಂದ, ಕಾರ್ಕಳದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ವಿಚಾರವನ್ನು ಹನಿಟ್ರ್ಯಾಪ್  ಎಂದು ಜಾಲತಾಣಗಳಲ್ಲಿ ಬಿಂಬಿಸಲಾಗಿದೆ. ಅದು ಹನಿಟ್ರ್ಯಾಪ್ ಅಲ್ಲ ಎಂದು ಉಡುಪಿ ಎಸ್ಪಿಯೇ ಹೇಳಿಕೆ ನೀಡಿದ್ದಾರೆ. ಆದರೂ ವೆನ್ಲಾಕ್ ಆಸ್ಪತ್ರೆಯ ದಲಿತ ಯುವತಿಯೇ  ಆತ್ಮಹತ್ಯೆಗೆ ಕಾರಣ ಎಂದು ಪ್ರಚಾರ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ನ್ಯಾಯಕೋರಿ ಡಿಸಿಆರ್‌ಇ ಮೊರೆ ಹೋದರೆ ಸರಿಯಾದ ಸ್ಪಂದನ ಸಿಗುತ್ತಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಡಿಸಿಆರ್‌ಇ ಎಸ್ಪಿಯವರು ಕಚೇರಿಯಲ್ಲಿ ಇರುವುದಿಲ್ಲ. ಯಾವಾಗಲೂ ಎಸ್‌ಐಟಿ ತನಿಖೆಯಲ್ಲಿ ಇದ್ದೇನೆ ಎನ್ನುತ್ತಿದ್ದಾರೆ. ಡಿಸಿಆರ್‌ಇನಲ್ಲಿ ಹುದ್ದೆಗಳು ಖಾಲಿ ಇದ್ದು, ಪೂರ್ಣ ನೇಮಕಾತಿ ವಿನಃ ಸಮಸ್ಯೆ ಬಗೆಹರಿಯುವುದಿಲ್ಲ. ಎಡಿಜಿಪಿ ಜೊತೆಗೆ ಸಭೆ ನಡೆಸಿದರೂ ಖಾಲಿ ಹುದ್ದೆ ಭರ್ತಿಗೆ ಯಾವುದೇ ಕ್ರಮಗಳು ಆಗುತ್ತಿಲ್ಲ. ಹಾಗಾಗಿ ದಲಿತರಿಗೆ  ನ್ಯಾಯ ಸಿಗಬೇಕಾದರೆ ಪೂರ್ಣಕಾಲಿಕೆ ಅಧಿಕಾರಿಗಳ ನೇಮಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಡಿಸಿಪಿ ಮಿಥುನ್, ಖಾಲಿ ಹುದ್ದೆ ಭರ್ತಿ ಕೋರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು. ಅಲ್ಲದೆ ಗೃಹ ಸಚಿವರಿಗೆ ಮನ ವಿ ಸಲ್ಲಿಸಲೂ ಅವಕಾಶ ಇದೆ ಎಂದರು.

ಠಾಣೆಗಳಿಗೆ ಸೂಚನೆ:

ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸ್ ಠಾಣೆಗಳು ನಾಗರಿಕ ಸ್ನೇಹಿ ಆಗದೆ ಅಲ್ಲಿನ ಅಧಿಕಾರಿಗಳು ಬೇಕಾಬಿಟ್ಟಿ ಕಾರುಭಾರು  ನಡೆಸುತ್ತಿದ್ದಾರೆ. ಠಾಣೆಗೆ ದೂರು ನೀಡಲು ಆಗಮಿಸುವವರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಪೊಲೀಸ್ ಕಮಿಷನರ್‌ಗೆ ಒಳ್ಳೆಯ ಹೆಸರು ಇದೆ, ಆದರೆ  ಇಂತಹವರಿಂದ ಪೊಲೀಸರ ಹೆಸರು ಕೆಡಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ವರ್ಗಾವಣೆಗೊಳಿಸಬೇಕು ಎಂದು ದಲಿತ ಮುಖಂಡೆ ಸುಮತಿ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಮಿಥುನ್, ಈ ಆರೋಪಗಳ ಕುರಿತಂತೆ ಇಲಾಖೆಯಿಂದ ಸತ್ಯಾಂಶ ತಿಳಿಯಲಾಗುವುದು. ಪೊಲೀಸ್ ಠಾಣೆಗಳು ನಾಗರಿಕ ಸ್ನೇಹಿಯಾಗಿ  ಇರಬೇಕಾಗಿದ್ದು, ಯಾವುದೇ ಕಾರಣಕ್ಕೂ ನಾಗರಿಕರ ದೂರು ವ್ಯಕ್ತವಾಗದಂತೆ ನೋಡಿಕೊಳ್ಳಬೇಕು. ಅಂಥದ್ದೇನಾದರೂ ಕಂಡುಬಂದರೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಬಹುದು ಎಂದರು.

ವೆನ್ಲಾಕ್ ನಿರ್ಲಕ್ಷ್ಯ:

ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಕಾರ್ಡ್‌ನಲ್ಲಿ ಸರಿಯಾಗಿ ದಾಖಲಿಸುತ್ತಿಲ್ಲ. ಮಾತ್ರವಲ್ಲ ರೋಗಿಗಳ ಬೆಡ್‌ಗೂ ನಂಬರು ನೀಡುತ್ತಿಲ್ಲ. ಇದರಿಂದಾಗಿ ಶುಶ್ರೂಶೆ ವೇಳೆ ವಿಪರೀತ ತೊಂದರೆಯಾಗುತ್ತಿದೆ. ಯಾರದೋ ಔಷಧವನ್ನು ಇನ್ಯಾರಿಗೋ ನೀಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದರೂ ಸಮಸ್ಯೆ  ಸರಿಯಾಗಿಲ್ಲ ಎಂದು ದಲಿತ ಮುಖಂಡ ಮುಕೇಶ್ ಹೇಳಿದರು.

ನಗರ ಪಾಲಿಕೆಯ ನೈರ್ಮಲ್ಯ ವಿಭಾಗದ ನೌಕರರೊಬ್ಬರು ಮಹಿಳೆಯೊಬ್ಬರಿಗೆ ಲೈಂಕಿಕ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,  ಉರ್ವಸ್ಟೋರ್‌ನಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಬೇಕು. ಹಳೆ ಡಿಸಿ ಕಚೇರಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯನ್ನು ಸ್ಥಳಾಂತರಿಸಬೇಕು ಎಂಬ ಆಗ್ರಹ  ಕೇಳಿಬಂತು.

ದಕ್ಷಿಣ ಎಸಿಪಿ ವಿಜಯಕ್ರಾಂತಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article