ಮಹಿಳೆಯ ಸರ ಕಳವು ಮಾಡಿದವನ ಬಂಧನ: ಕರಿಮಣಿ ವಶಕ್ಕೆ
ಬಂಧಿತನನ್ನು ಬಂಟ್ವಾಳ ತಾಲೂಕಿನ ಕಕ್ಕೆಪದವು ಉಳಿಗ್ರಾಮದ ನಿವಾಸಿ ರೋಹಿತ್ ಬಿ. ದಾಸ್ (24) ಎಂದು ಗುರುತಿಸಲಾಗಿದೆ.
ಬಂಧಿತನ ವಿರುದ್ಧ 2025ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 7 ಸರಗಳ್ಳತನ (ಚೈನ್‌ಸ್ಟಾಚಿಂಗ್) ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಡಿ.25 ರಂದು ಸಂಜೆ ಗುರುನಗರ ನಿವಾಸಿ ರತ್ನಾವತಿ ಅವರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಯ ಕಡೆಗೆ ಶಂಕರಭವನ ಹೊಟೇಲ್ ಬಳಿಯ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಸಂಜೆ ಸುಮಾರು 6.30 ಗಂಟೆಗೆ ಹಿಂದಿನಿಂದ ಬಂದ ಓರ್ವ ಅಪರಿಚಿತ ವ್ಯಕ್ತಿ ಏಕಾಏಕಿ ರತ್ನಾವತಿಯವರ ಕುತ್ತಿಗೆಯಲ್ಲಿದ್ದ 32 ಗ್ರಾಂ. ತೂಕದ ಬೆಲೆ ಬಾಳುವ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಓಡಿ ಹೋಗಿದ್ದು, ಈ ಬಗ್ಗೆ ಅದೇ ದಿನ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 128/2025 ಕಲಂ: 304(2) ಭಾರತೀಯ ನ್ಯಾಯ ಸಂಹಿತೆ-2023 ರಂತೆ ಪ್ರಕರಣ ದಾಖಲಿಸಿದ್ದರು.
ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗವಿರಾಜ್ ಮತ್ತು ಪಿಎಸ್‌ಐ ಅರುಣ್ ಕುಮಾರ್ ಅವರು, ಠಾಣೆಯ ಕ್ರೈಂ ಸಿಬ್ಬಂದಿಗಳು ಮತ್ತು ಎಸಿಪಿ ದಕ್ಷಿಣ ಉಪವಿಭಾಗದ ಕ್ರೈಂ ಸಿಬ್ಬಂದಿಗಳು ಸೇರಿ ಆರೋಪಿಯ ಪತ್ತೆ ಕಾರ್ಯವನ್ನು ನಡೆಸಿದ್ದು, ಸಾಕ್ಷ್ಯಾಧಾರಗಳ ಮೇಲೆ ಡಿ.28 ರಂದು ಬೆಳಗ್ಗೆ ಸುಮಾರು 9.30 ಗಂಟೆಗೆ ಪ್ರಕರಣದ ಆರೋಪಿ ರೋಹಿತ್ ಬಿ. ದಾಸ್ ಎಂಬಾತನನ್ನು ಬಂಟ್ವಾಳದ ಕುಕ್ಕೆಪದವು ಎಂಬಲ್ಲಿ ದಸ್ತಗಿರಿ ಮಾಡಿ, ಸುಲಿಗೆ ಮಾಡಿದ 32 ಗ್ರಾಂ ಚಿನ್ನದ ಕರಿಮಣಿ ಸರ ಮೌಲ್ಯ 3,50,000 ರೂ. ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆಯಲ್ಲಿ ಆರೋಪಿಯು ಸ್ವಿಗ್ಗಿ ಮತ್ತು ಝೋಮೆಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಸ್ಕೂಟರ್ ಖರೀದಿಸಿದ್ದು ಮತ್ತು ಇತರ ವಿಚಾರಗಳಿಗೆ ಲಕ್ಷಾಂತರ ರೂ.ಗಳ ಸಾಲ ಮಾಡಿದ್ದು, ಸಾಲವನ್ನು ತೀರಿಸಲು ಈ ಕೃತ್ಯವನ್ನು ಎಸಗಿರುವುದು ಈವರೆಗಿನ ತನಿಖೆಯಲ್ಲಿ ತಿಳಿದುಬಂದಿದೆ.