ವಿಶ್ವ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೋತ್ಸವ
Friday, December 26, 2025
ಮೂಡುಬಿದಿರೆ: ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಟ್ರಸ್ಟ್ ವತಿಯಿಂದ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮೂಡುಬಿದಿರೆಯ ವಿಶ್ವಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಗುರುವಾರ ರಾತ್ರಿ ಲಕ್ಷ ದೀಪೋತ್ಸವ ನಡೆಯಿತು.
ಗುರುವಾರ ಸಾಯಂಕಾಲ ವಿವಿಧ ಭಜನಾ ತಂಡಗಳಿಂದ ಭಕ್ತಿ ಸುಧೆ-ಜಿನ ಭಜನಾ ಕಾರ್ಯಕ್ರಮ, ಪವಿತ್ರ ಪಂಚಾಮೃತ ಅಭಿಷೇಕ, ನಿವೃತ್ತ ಅಧ್ಯಾಪಕ ಉದಯಕುಮಾರ್ ಅವರಿಂದ ಮಹಾಪುರಾಣ ವಾಚನ ಹಾಗೂ ಶಿವಪ್ರಕಾಶ್ ಇಜಿತೊಟ್ಟು ಅವರಿಂದ ವ್ಯಾಖ್ಯಾನ ನಡೆಯಿತು. ಬಳಿಕ 'ಲಕ್ಷ ದೀಪೋತ್ಸವ' ಹಾಗೂ ಮಹಾಮಂಗಳಾರತಿ ನೆರವೇರಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ಟಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಕುಮಾರ್ ಬೆಟ್ಕೇರಿ, ಆದರ್ಶ್ ಕೊಂಡೆ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಸಹಿತ ಶ್ರಾವಕರು ಉಪಸ್ಥಿತರಿದ್ದರು.
