ಸಾಹಿತ್ಯ ಸಮ್ಮೇಳನಗಳಿಂದ ಭಾಷೆಯ ಸಂರಕ್ಷಣೆ: ಡಾ. ಕೆ. ಚಿನ್ನಪ್ಪ ಗೌಡ
ಅವರು ಕೊಯ್ಯೂರಿನ ಸರಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನ ವಠಾರದಲ್ಲಿ ಡಿ.28 ರಂದು ನಡೆದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಶಿಕ್ಷಣ ನೀಡುವುದರಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಹಿಂದೆ ಬಿದ್ದಿಲ್ಲ. ಆದರೆ ಇಲ್ಲಿ ಸೌಕರ್ಯಗಳ ಕೊರತೆ ಇರುವುದರಿಂದ ಪೋಷಕರು ಮಕ್ಕಳನ್ನು ಕಳುಹಿಸಲು ಹಿಂಜರಿಯುವಂತಾಗಿದೆ. ಸಾಹಿತ್ಯ ನಿರ್ಮಾಣದ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತವೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಪರಸ್ಪರ ಅವಿನಾಭಾವ ಸಂಬಂಧವನ್ನು ಹೊಂದಿದ್ದು ಈ ಆಶಯದೊಂದಿಗೆ ನಡೆಯುವ ಸಮ್ಮೇಳನವು ಜನರ ತಿಳುವಳಿಕೆ ಹಾಗೂ ಅರಿವನ್ನು ಹೆಚ್ಚಿಸಲಿದೆ ಎಂದರು.
ಸಮ್ಮೇಳನಾದ್ಯಕ್ಷ ಬಿ.ಭುಜಬಲಿ ಧರ್ಮಸ್ಥಳ ಮಾತನಾಡಿ, ಕನ್ನಡ ಸಾಹಿತ್ಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಯೋಚಿಸಬೇಕಾಗಿದೆ. ಸವಾಲುಗಳು ಉಂಟಾಗುತ್ತಿರುವುದು ಶತ್ರುಗಳಿಂದಲ್ಲ. ನಮ್ಮ ನಿರ್ಲಕ್ಷತನ, ಓದುವ ಸಂಸ್ಕೃತಿಯ ಕ್ಷಯದಿಂದ ಪ್ರಧಾನ ಯುಗದಲ್ಲಿ ಪುಸ್ತಕ ಮಾರುಕಟ್ಟೆ ವಸ್ತುವಾಗಿದೆ. ಸಾಹಿತ್ಯ ವಿಷಯವಷ್ಟೇ ಆಗುತ್ತಿದೆ. ಶಿಕ್ಷಣವು ವ್ಯಕ್ತಿಯನ್ನು ಮಾತ್ರವಲ್ಲ ಒಂದು ಸಮಾಜವನ್ನು ಮೇಲಕ್ಕೆ ಎತ್ತುವ ಶಕ್ತಿ ಹೊಂದಿದೆ. ಕನ್ನಡ ಸಾಹಿತ್ಯವು 2,000ಕ್ಕೂ ಹೆಚ್ಚು ವರ್ಷಗಳ ಇತಿಹಾಸದೊಂದಿಗೆ ಸಮೃದ್ಧ ಪರಂಪರೆಯನ್ನು ಹೊಂದಿದೆ. ಕನ್ನಡ ಸಾಹಿತ್ಯವು ಕೇವಲ ಅಕ್ಷರಗಳ ಗುಚ್ಛವಲ್ಲ, ಅದು ನಮ್ಮ ಬದುಕಿನ ಪ್ರತಿಬಿಂಬ, ನಮ್ಮ ಸಮಾಜದ ಅಂತಃಶಕ್ತಿ, ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅನನ್ಯವಾದುದು. ಯಕ್ಷಗಾನವು ಭಾಷೆಯ ಶ್ರೀಮಂತಿಕೆಗೆ ಉತ್ತಮ ತಳಹದಿಯಾಗಿದೆ ಎಂದರು.
ಸಮ್ಮೇಳನದ ಚಾರುಮುಡಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಕಳೆದ ನಾಲ್ಕು ವರ್ಷಗಳಲ್ಲಿ 13 ತಾಲೂಕು, 3 ಜಿಲ್ಲಾ ಹಾಗೂ 2 ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಾನಾ ಆಶಯಗಳೊಂದಿಗೆ ನಡೆಸಲಾಗಿದೆ. ಮಾರ್ಚ್ ತಿಂಗಳಲ್ಲಿ ಬಂಟ್ವಾಳದಲ್ಲಿ ಈ ಬಾರಿಯ ಜಿಲ್ಲಾ ಮಟ್ಟದ ಸಮ್ಮೇಳನ ನಡೆಯಲಿದೆ. ಭಾಷೆಯು ಸಂವಹನಕ್ಕೆ ಮಾತ್ರ ಬಳಕೆಯಾಗದೆ ಕೃತಿಗಳ ಮೂಲಕವೂ ಮೂಡಿ ಬರಬೇಕು ಎಂದರು.
ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಪ್ರೊ.ಎ. ಕೃಷ್ಣಪ್ಪ ಪೂಜಾರಿ ಮಾತನಾಡಿ, ಕನ್ನಡ ಭಾಷೆಯನ್ನು ನಿರಂತರವಾಗಿ ಬಳಸಿ, ಉಳಿಸಬೇಕಾಗಿದೆ. ಆಂಗ್ಲ ಭಾಷೆಯ ಬಳಕೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇರಬೇಕು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ, ಸಾಹಿತ್ಯ, ವಿಚಾರಗಳ ಚಿಂತನೆಗಳು ಮೂಡಿ ಬರಬೇಕಾಗಿದೆ ಎಂದರು.
ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ದಯಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಮಾತನಾಡಿದರು. ಕ.ಸಾ.ಪ. ತಾಲೂಕು ಅಧ್ಯಕ್ಷ ಯದುಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮ್ಮೇಳನ ಸಂಯೋಜನೆ ಸಮಿತಿಯ ಗೌರವಾಧ್ಯಕ್ಷ ದರ್ಣಪ್ಪ ಗೌಡ ಹಲೆಕ್ಕಿ, ಕಾರ್ಯಾಧ್ಯಕ್ಷರಾದ ಮೋಹನ ಗೌಡ, ರಾಧಾಕೃಷ್ಣ ತಚ್ಚಮೆ ಪದಾಧಿಕಾರಿಗಳಾದ ಲೋಕೇಶ್ ಗೌಡ, ಕೇಶವ ಗೌಡ, ದಾಮೋದರ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಂಯೋಜನೆ ಸಮಿತಿ ಅಧ್ಯಕ್ಷ ಅಶೋಕ್ ಭಟ್ ಅಗ್ರಸಾಲೆ ಸ್ವಾಗತಿಸಿದರು. ತಾಲೂಕು ಘಟಕ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ರಾಮಚಂದ್ರ ದೊಡಮನಿ ಹಾಗೂ ದೀಪ್ತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.